
ಕನ್ನಡ ಬಿಂಬ, ಬೀದರ್
ನೌಬಾದ್ ಬಳಿ ಇರುವ ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಒತ್ತಾಯಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಈಚೆಗೆ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡುವಾಗ, ರೇಷ್ಮೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ನಾಯಕ ಅರವಿಂದಕುಮಾರ ಅರಳಿ, ರೇಷ್ಮೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಬಾರದು ಎಂದು ಆಗ್ರಹಪಡಿಸಿದ್ದಾರೆ.
ರೇಷ್ಮೆ ಇಲಾಖೆಗೆ ಸೇರಿದ ಜಮೀನನ್ನು, ರೇಷ್ಮೆ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಬೇಕು. ಅದರ ಬದಲು ಕ್ರೀಡಾಂಗಣ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಈ ಕುರಿತು ಸಚಿವ ಈಶ್ವರ ಖಂಡ್ರೆ ಅವರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅರಳಿ ಅವರು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ರೇಷ್ಮೆ ಕ್ಷೇತ್ರ ಹೆಚ್ಚಿಲ್ಲ. ಪೂರಕ ವಾತಾವರಣ ಇದ್ದ ನಂತರವೂ ರೇಷ್ಮೆ ಬೇಸಾಯ ಕ್ಷೇತ್ರ ಹೆಚ್ಚುತ್ತಿಲ್ಲ. ರೇಷ್ಮೆ ಕೃಷಿಗೆ ಇರುವ ಅವಕಾಶಗಳನ್ನು ಬಳಸಿಕೊಂಡು ರೈತರ ಆದಾಯ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕಾಗಿದೆ. ಇದಕ್ಕಾಗಿ ರೇಷ್ಮೆ ಇಲಾಖೆಗೆ ಸೇರಿರುವ ಜಮೀನು ಬಳಸಿಕೊಳ್ಳಬಹುದು ಎಂದು ಅರಳಿ ತಿಳಿಸಿದ್ದಾರೆ.
ತೋಟಗಾರಿಕೆ ಕಾಲೇಜನ್ನು ಉಳಿಸಿಕೊಳ್ಳಲು ಈ ಹಿಂದೆ ರೇಷ್ಮೆ ಇಲಾಖೆಗೆ ಸೇರಿದ 82 ಎಕರೆ ಜಮೀನಿನ ಪೈಕಿ 49 ಎಕರೆ ಜಮೀನನ್ನು ಕಾಲೇಜಿಗೆ ಕೊಡಿಸಲಾಗಿತ್ತು. 3.5 ಕೋಟಿ ರೂ. ಭರಿಸಿ, ಜಮೀನು ಪಡೆದುಕೊಳ್ಳುವಂತೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿತ್ತು. ಆದರೆ, ವಿವಿಯಲ್ಲಿ ಅನುದಾನ ಲಭ್ಯವಿರಲಿಲ್ಲ. ಹೀಗಾಗಿ ಹೋರಾಟ ನಡೆಸಿ, ಉಚಿತವಾಗಿ ತೋಟಗಾರಿಕೆ ಕಾಲೇಜಿಗೆ ಈ ಜಮೀನು ಕೊಡಿಸಲಾಗಿತ್ತು. ಈ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸುವುದು ಸರಿಯಲ್ಲ ಎಂದು ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಿಸುವುದು ಸ್ವಾಗತಾರ್ಹ ಆದರೆ, ಸ್ಥಳದ ಬಗ್ಗೆ ಪುನರ್ ಪರಿಶೀಲನೆ ನಡೆಸುವಂತೆ ಸಚಿವ ಖಂಡ್ರೆಯವರಿಗೆ ಮುಖ್ಯಮಂತ್ರಿಯವರು ತಿಳಿಸಬೇಕು. ರೇಷ್ಮೆ ಇಲಾಖೆಗೆ ಸೇರಿದ ಸ್ಥಳದ ಬದಲು ಕಪಲಾಪುರ ಬಳಿ ಇರುವ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ಅರಳಿ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕಪಲಾಪುರ ಬಳಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಕ್ರೀಡಾಂಗಣ ನಿರ್ಮಿಸಲು ಯೋಜಿಸಿತ್ತು. ಬೇರೆ ಬೇರೆ ಕಾರಣದಿಂದಾಗಿ ಅದು ಕಾರ್ಯಗತವಾಗಿರಲಿಲ್ಲ. ಇದೀಗ ಸರಕಾರದ ಬದಲು, ಕ್ರಿಕೆಟ್ ಸಂಸ್ಥೆಯಿಂದಲೇ ಇಲ್ಲಿ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಿದೆ. ಕ್ರೀಡಾಂಗಣದ ಅನುದಾನವನ್ನು ಬೇರೆ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದು ಎಂದು ಅರವಿಂದಕುಮಾರ ಅರಳಿ ತಿಳಿಸಿದ್ದಾರೆ.


