
ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲದ ಮಹಾದೇವ ಮಂದಿರದ ಭಿತ್ತಿಯಲ್ಲಿರುವ ಲಿಪಿಕಾರ್ತಿಯ ಶಿಲ್ಪ.
ಮಾರುತಿ ಸೋನಾರ್, ಬೀದರ್
ತಾಯಿ, ಅಕ್ಕ, ತಂಗಿ, ಪತ್ನಿ, ಸ್ನೇಹಿತೆ, ಶಿಕ್ಷಕಿ, ನಾಯಕಿ ಹೀಗೆ ಅನೇಕ ಪಾತ್ರಗಳ ಜೀವಂತ ಪ್ರತಿರೂಪವೇ ಮಹಿಳೆ. ಮನೆಯ ಅಂಗಳದಿಂದ ದೇಶದ ಗಡಿಯವರೆಗೂ ಹೆಜ್ಜೆ ಗುರುತು ಮೂಡಿಸಿರುವ ಸಾಧಕಿ. ಮಹಿಳೆ ದಯೆಯ ಪ್ರತೀಕ. ಹಾಗೆಯೇ ಧೈರ್ಯದ ಪ್ರತಿರೂಪವೂ ಹೌದು. ಮನಸು ಮೃದು. ಆದರೆ, ಎಂತಹದೇ ಸಂಕಷ್ಟ ಎದುರಾದರೂ ಎದೆಗುಂದದೆ ಎದುರಿಸುವ ಧೈರ್ಯವಂತೆ. ಮಹಿಳೆಯರನ್ನು ಗೌರವಿಸಬೇಕು. ಮಹಿಳೆಯರ ಹಕ್ಕುಗಳನ್ನು ಕಾಪಾಡಬೇಕು. ಸಮಾನ ಅವಕಾಶ ಒದಗಿಸಬೇಕು. ಕನಸುಗಳಿಗೆ ಬೆಂಬಲ ನೀಡಬೇಕು. ಯಾಕೆಂದರೆ, ಮಹಿಳೆ ಲೋಕದ ಉಸಿರು. ಮಹಿಳೆ ಇದ್ದರಷ್ಟೇ ಈ ಲೋಕ ಜೀವಂತವಾಗಿರಬಲ್ಲದು.
ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಉದ್ಯಮ, ವಿಜ್ಞಾನ, ತಂತ್ರಜ್ಞಾನ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಮಹಿಳೆಯರು ಹೆಜ್ಜೆ ಗುರುತು ಮೂಡಿಸಿದ್ದಾರೆ. ಆದರೆ, ರಾಜಕೀಯ ಕ್ಷೇತ್ರ ಅದರಲ್ಲೂ ಶಾಸನಸಭೆಯ ಪ್ರವೇಶ ಮಾತ್ರ ಈಗಲೂ ಮಹಿಳೆಯರ ಪಾಲಿಗೆ ದೂರದ ಕನಸಾಗಿಯೇ ಉಳಿದಿದೆ.
ಮಹಿಳೆ ಗೆಲ್ಲುವ ಪ್ರಮಾಣ ಕಡಿಮೆ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸುವುದು ಹೆಚ್ಚುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಬರೀ ಪುರುಷರ ಮತಗಳಷ್ಟೇ ಸಾಕಾಗುವುದಿಲ್ಲ. ಪುರುಷರ ಗೆಲುವಿನಲ್ಲಿ ಮಹಿಳಾ ಮತದಾರರ ಪಾತ್ರ ಇರುವಂತೆ, ಮಹಿಳೆಯರ ಗೆಲುವಿಗೂ ಪುರುಷ ಮತದಾರರು ಒಂದಾಗಿ ಬೆಂಬಲಿಸುವಂತಹ ಪರಿಸ್ಥಿತಿಯನ್ನು ನಿರ್ಮಿಸುವ ಕಾರ್ಯಕ್ಕೆ ಎಲ್ಲರೂ ಮುಂದಾಗಬೇಕಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರ ಸ್ಥಿತಿ ಉತ್ತಮವಾಗಿದೆ. ಅರ್ಧದಷ್ಟು ಸ್ಥಾನಗಳು ಮೀಸಲಾಗಿದ್ದರಿಂದ ಪಂಚಾಯಿತಿಗಳಲ್ಲಿ ಮಹಿಳೆಯರ ಧ್ವನಿ ಕೇಳಲು ಸಾಧ್ಯವಾಗಿದೆ. `ಅಧಿಕಾರ’ ಬಳಕೆಯ ವಿಷಯದಲ್ಲಿ ಟೀಕೆ ಟಿಪ್ಪಣೆ ಇವೆಯಾದರೂ, ಈ ಕಾರಣಕ್ಕಾಗಿಯೇ `ಅಧಿಕಾರ’ ನಿರಾಕರಿಸುವುದು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗುತ್ತದೆ. ಅಧಿಕಾರ ಚಲಾವಣೆಯ ವಿಷಯ ಏನಾದರೂ ಆಗಿರಲಿ, ಹೆಣ್ಣು ಮಕ್ಕಳಿಗೆ ಪ್ರಾತಿನಿಧ್ಯ ಲಭಿಸಿರುವುದು ಸಮಾಧಾನಕರ. ಇಂತಹದೇ ಬದಲಾವಣೆಯನ್ನು ಶಾಸನ ಸಭೆಯಲ್ಲಿ ಕಾಣಬೇಕಾಗಿದೆ. ಶಾಸನದ ಬಲ, ಬೆಂಬಲ ಲಭಿಸಿದರಷ್ಟೇ ಇದು ಸಾಧ್ಯವಾಗಬಲ್ಲದು.
ಒಟ್ಟು ಮತದಾರರ ಸಂಖ್ಯೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಅರ್ಧದಷ್ಟಿದೆ. ಆದರೆ, ಶಾಸನ ಸಭೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಶೇ. 10 ರಷ್ಟೂ ಕಾಣುವುದಿಲ್ಲ. ಹೆಣ್ಣು ಮಕ್ಕಳಿಗೆ ಶಾಸನ ಸಭೆಯ ಪ್ರವೇಶವನ್ನು ಎಲ್ಲಿ ನಿರಾಕರಿಸಲಾಗಿದೆ ಎಂದು ಕೇಳಬಹುದು. ಹೌದು. ಪ್ರವೇಶ ನಿರಾಕರಿಸಿರಲಿಕ್ಕಿಲ್ಲ. ಆದರೆ, ಈ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ `ಸ್ಪರ್ಧಾಕಣ’ದಿಂದ ದೂರ ಇಡುವ ವ್ಯವಸ್ಥಿತ ಪ್ರಯತ್ನವಂತೂ ನಡೆಯುತ್ತಲೇ ಇದೆ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮಹಿಳೆಯರು `ಅಭ್ಯರ್ಥಿ’ ಆಗುತ್ತಿರುವುದನ್ನು ಕಾಣಲಿಕ್ಕೆ ಸಾಧ್ಯವಿದೆ.
ಇತರೆಲ್ಲ ಕ್ಷೇತ್ರಗಳಲ್ಲಿ ಅರ್ಹತೆ, ಸಾಮಥ್ರ್ಯದಿಂದ ಅವಕಾಶ ಪಡೆದುಕೊಳ್ಳಬಹುದು. ಆದರೆ, ರಾಜಕಾರಣ ಮಾತ್ರ ಬೇರೆಯೇ ಆಗಿದೆ. ಇಲ್ಲಿರುವ ಪುರುಷ ಪ್ರಧಾನ ವ್ಯವಸ್ಥೆಯು ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇಷ್ಟಪಡುತ್ತಿಲ್ಲ. ಮಹಿಳಾ ನಾಯಕತ್ವ ಬೆಳೆಯುವುದೂ ಈ ವ್ಯವಸ್ಥೆಗೆ ಬೇಕಾಗಿಲ್ಲ. ಈ ರಾಜಕೀಯ ವ್ಯವಸ್ಥೆಯು ಮಹಿಳಾ ಪ್ರಾತಿನಿಧ್ಯವನ್ನು ನಿರಾಕರಿಸುತ್ತಲೇ ಬಂದಿದೆ. ಮೀಸಲಾತಿಯಂತಹ ಅಸ್ತ್ರದಿಂದಷ್ಟೇ ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಅವಕಾಶ, ಪ್ರ್ರಾತಿನಿಧ್ಯ ಸಿಗಬಹುದೇನೋ.
ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ನಡೆದಿರುವ ಆರು ವಿಧಾನಸಭಾ ಚುನಾವಣೆಗಳನ್ನು ನೋಡಿದಾಗ, ಮಹಿಳೆಯರನ್ನು ಶಾಸನಸಭೆಯ ಪ್ರವೇಶದಿಂದ ದೂರ ಇಟ್ಟಿರುವುದನ್ನು ಕಾಣಲು ಸಾಧ್ಯವಿದೆ. 1999 ರ ವಿಧಾನಸಭಾ ಚುನಾವಣೆಯಲ್ಲಿ 62 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ ಗೆದ್ದವರು 6 ಜನ ಮಾತ್ರ. 2004 ರಲ್ಲೂ ಆರು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದರು. 2008 ರ ಚುನಾವಣೆಯಲ್ಲಿ ಗೆದ್ದವರು ಮೂವರು ಮಹಿಳೆಯರು ಮಾತ್ರ.
2013 ರ ಚುನಾವಣೆಯಲ್ಲಿ 6, 2018 ರ ಚುನಾವಣೆಯಲ್ಲಿ 8 ಮತ್ತು 2023 ರ ಚುನಾವಣೆಯಲ್ಲಿ 10 ಮಹಿಳೆಯರು ಆಯ್ಕೆಯಾಗಿ ಶಾಸನ ಸಭೆ ಪ್ರವೇಶಿಸಿದ್ದಾರೆ. ಮಹಿಳೆಯರ ಆಯ್ಕೆಯ ಪ್ರಮಾಣ ಶೇ. 5 ಕ್ಕಿಂತ ಕಡಿಮೆ ಇರುವುದನ್ನು ಕಾಣಬಹುದು.
1957 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ 13 ಮಹಿಳೆಯರು ಗೆದ್ದಿದ್ದರು. 1962 ರ ಚುನಾವಣೆಯಲ್ಲಿ 18 ಮಹಿಳೆಯರು ಆಯ್ಕೆಯಾಗಿದ್ದರು. ಈ ಎರಡೂ ಚುನಾವಣೆಗಳಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಅನ್ನಪೂರ್ಣಬಾಯಿ ಆಯ್ಕೆಯಾಗಿದ್ದರು. ಅತೀ ಹೆಚ್ಚು ಮಹಿಳೆಯರು ಆಯ್ಕೆಯಾಗಿದ್ದು 1962 ರ ಚುನಾವಣೆಯಲ್ಲಿ. ಆರು ದಶಕಗಳ ನಂತರವೂ ಇದು ದಾಖಲೆಯಾಗಿಯೇ ಉಳಿದಿದೆ.
ಸಾವಿರ ವರ್ಷಗಳ ಹಿಂದೆ ಕಲ್ಯಾಣವನ್ನು ರಾಜಧಾನಿ ಮಾಡಿಕೊಂಡು ಆಡಳಿತ ನಡೆಸಿದ ಚಾಲುಕ್ಯ ಅರಸ ಆರನೇ ವಿಕ್ರಮಾದಿತ್ಯ ತನ್ನ ರಾಣಿಯರಿಗೆ ಆಡಳಿತದಲ್ಲಿ ಭಾಗಿಯಾಗುವ ಅವಕಾಶ ನೀಡಿದ್ದ. ರಾಣಿ, ಮಹಾರಾಣಿಯರನ್ನು ಅರಮನೆ, ಅಂತ:ಪುರಕ್ಕೆ ಸೀಮಿತಗೊಳಿಸದೆ ಬೇರೆ ಬೇರೆ ಪ್ರಾಂತಗಳ ಆಡಳಿತದ ಜವಾಬ್ದಾರಿ ವಹಿಸಿಕೊಟ್ಟಿದ್ದ. ಅರಸನ ಆಡಳಿತಕ್ಕೆ ಸಾಥ್ ನೀಡಿದ ಈ ಅರಸಿಯರ ಬಗ್ಗೆ ಶಾಸನಗಳಲ್ಲಿ ಉಲ್ಲೇಖ ಇರುವುದನ್ನು ಕಾಣಬಹುದು.


