Ad imageAd image

ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳುತ್ತಿರುವ ಖಂಡ್ರೆ

Kannada Bimba Team
3 Min Read

 

ಕನ್ನಡ ಬಿಂಬ, ಬೀದರ್

ಅರಣ್ಯ ಹಾಗೂ ಬೀದರ್  ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆ ಅವರು ತಮ್ಮ ವೈಫಲ್ಯ ಮುಚ್ಚಿಕೊಳ್ಳುವುದಕ್ಕಾಗಿ ವಿಮಾ ಕಂಪೆನಿಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಭಗವಂತ ಖೂಬಾ ಕಿಡಿ ಕಾರಿದ್ದಾರೆ.

ಸಚಿವ ಸ್ಥಾನದಲ್ಲಿ ಇದ್ದರೂ ಜಿಲ್ಲೆಯ ರೈತರಿಗೆ ಕಬ್ಬಿನ ಬೆಲೆ ಕೊಡಿಸುವಲ್ಲಿ ಖಂಡ್ರೆ ವಿಫಲರಾಗಿದ್ದಾರೆ. ಬೆಳೆ ವಿಮೆ ಯೋಜನೆಯಡಿ ಸರಿಯಾದ ಪರಿಹಾರ ಕೊಡಿಸಲೂ ಅವರಿಂದ ಆಗುತ್ತಿಲ್ಲ. ಈ ವೈಫಲ್ಯ ಮುಚ್ಚಿಕೊಳ್ಳಲು ಅಧಿವೇಶನದಲ್ಲಿ ಫಸಲ್  ಬಿಮಾ ಯೋಜನೆ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಭಗವಂತ ಖೂಬಾ ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಸಚಿವ ಸ್ಥಾನದಲ್ಲಿರುವ ಖಂಡ್ರೆಯವರ ವೈಫಲ್ಯಗಳನ್ನು ಬಯಲು ಮಾಡಿದ್ದರಿಂದ ತಮ್ಮ ವಿರುದ್ಧ ಅರ್ಥಹೀನ ಹೇಳಿಕೆ ನೀಡುತ್ತಿದ್ದಾರೆ. ಇಂತಹವರು ಅಧಿಕಾರದಲ್ಲಿರುವುದು ಜಿಲ್ಲೆಯ ಜನರ ದುರ್ದೈವ ಎಂದು ಖೂಬಾ ತಿಳಿಸಿದ್ದಾರೆ.

ಈಶ್ವರ ಖಂಡ್ರೆ ಹೇಳುವಂತೆ ಫಸಲ್  ಬಿಮಾ ಯೋಜನೆಯಿಂದ ವಿಮಾ ಕಂಪನಿಗಳಿಗೆ ಲಾಭವಾಗುವುದಾದರೆ ರಾಜ್ಯದಲ್ಲಿ  ಅವರದ್ದೇ ಸರ್ಕಾರವಿದೆ. ಅವರ ಸರಕಾರವೇ ಟೆಂಡರ್  ಮಾಡಿ ವಿಮಾ ಕಂಪೆನಿಯನ್ನು ನೇಮಿಸುತ್ತದೆ. ಈ ಪ್ರಕ್ರಿಯೆ ನಡೆಯುವಾಗ ಮೌನವಾಗಿದ್ದ  ಈಶ್ವರ ಖಂಡ್ರೆ ಈಗ ಸುಳ್ಳು ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ. ಈ ವರ್ಷ ಪಕ್ಕದ ಕಲಬುರಗಿ ಜಿಲ್ಲೆಗೆ 585 ಕೋಟಿ ರೂ. ವಿಮೆ ಪರಿಹಾರ ಬಂದಿದೆ. ಆದರೆ, ಬೀದರ್ ಜಿಲ್ಲೆಗೆ ಪರಿಹಾರ ಕೊಡಿಸಲಾಗದ ಖಂಡ್ರೆ ಸುಳ್ಳು ಆರೋಪ  ಮಾಡುತ್ತಿದ್ದಾರೆ ಎಂದು ಖೂಬಾ ದೂರಿದ್ದಾರೆ.

ಕಳೆದ ವಾರವೇ ವಿಮಾ ಕಂಪನಿಯಿಂದ ಮಧ್ಯ ಋತುವಿನ ಪ್ರತಿಕೂಲ ಪರಿಸ್ಥಿತಿಯಡಿ ರೂ. 36.75 ಕೋಟಿ ಪರಿಹಾರ ಜಿಲ್ಲೆಯ ರೈತರಿಗೆ ಬಂದಿದೆ. ಈಶ್ವರ ಖಂಡ್ರೆ ಹಾಗೂ ಅವರ ಪುತ್ರ ಸಂಸದ ಸಾಗರ ಖಂಡ್ರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ಹಾಕಿಕೊಂಡು ಬಡಾಯಿ ಕೊಚ್ಚಿಕೊಂಡಿದ್ದರು. ಇದೀಗ ಅವರೇ ವಿಮೆ ಯೋಜನೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಖೂಬಾ ಲೇವಡಿ ಮಾಡಿದ್ದಾರೆ.

ವಿಮೆ ಕಂಪೆನಿಗಳು ರೈತರು ಹಾಗೂ ಸರಕಾರದಿಂದ ಶೇ. 14 ರಷ್ಟು ವಿಮಾ ಕಂತು ಪಡೆಯುತ್ತವೆ. ಬೆಳೆ ನಷ್ಟದ ಸಂದರ್ಭದಲ್ಲಿ ಶೇ. 94 ರಿಂದ ಶೇ. 96 ರಷ್ಟು ಪರಿಹಾರ ನೀಡುತ್ತವೆ. ಈ ವಿಷಯ ಖಂಡ್ರೆಯವರಿಗೂ ತಿಳಿದಿದೆ. ಆದರೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಆರೋಪ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಖೂಬಾ ಟೀಕಿಸಿದ್ದಾರೆ.

ದೇಶದ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಸಾಮಾಜಿಕ ಸುರಕ್ಷತಾ ಯೋಜನೆಗಳಿಗೆ ಹಣ ಖರ್ಚು ಮಾಡುತ್ತವೆ. ರೈತರಿಗೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್  ಬಿಮಾ ಯೋಜನೆಯನ್ನು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಒಪ್ಪಿಕೊಂಡಿವೆ. ಇದರ ಸದುಪಯೋಗ ಪಡೆದುಕೊಳ್ಳುತ್ತಿವೆ. ಆದರೆ ರೈತರಿಗೆ ಒಳಿತಾಗುವುದು ಖಂಡ್ರೆಯವರಿಗೆ ಬೇಕಿಲ್ಲ. ಅದಕ್ಕಾಗಿಯೇ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಖೂಬಾ ತಿಳಿಸಿದ್ದಾರೆ.

ನಾನು ಎಂದಿಗೂ ಖಂಡ್ರೆಯಂತೆ ರಾಜಕೀಯವನ್ನು ಉದ್ಯಮವಾಗಿ ನೋಡಿಲ್ಲ.  ಹಣ ಕೊಟ್ಟು, ಬಕೇಟ್ ಹಿಡಿದು ರಾಜಕೀಯ ಮಾಡಿಲ್ಲ. ನಾನು ನಿರುದ್ಯೋಗಿ ಎಂದಾದರೆ ದೇಶದೆಲ್ಲೆಡೆ ಕಾಂಗ್ರೇಸ್ ಪಕ್ಷದವರು ಕಳೆದ ಒಂದು ದಶಕದಿಂದ ಸೋಲುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿರುವ ಖರ್ಗೇಯವರು ಸಹ ಸೋತಿದ್ದಾರೆ. ಅವರು ಕೂಡ ನಿರುದ್ಯೋಗಿಯೇ ಎಂಬುದನ್ನು ಈಶ್ವರ ಖಂಡ್ರೆ ಸ್ಪಷ್ಟಪಡಿಸಬೇಕು ಎಂದು ಭಗವಂತ ಖೂಬಾ ಒತ್ತಾಯಿಸಿದ್ದಾರೆ.

ಈಶ್ವರ  ಖಂಡ್ರೆಯವರ ಹೇಳಿಕೆಗಳು ಅವರ ಯೋಗ್ಯತೆಯನ್ನು ತೋರಿಸುತ್ತವೆ. ಅರಣ್ಯ ಸಚಿವರಾಗಿ, ಉಸ್ತುವಾರಿಯಾಗಿ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ.  ಕೇವಲ ಎರಡೇ ವರ್ಷದಲ್ಲಿ ಜನರಿಗೆ ಭಾರವಾಗಿದ್ದಾರೆ. ಜವಾಬ್ದಾರಿ ಅರಿತುಕೊಂಡು ಕೆಲಸ ಮಾಡುತ್ತಿಲ್ಲ. ನಾನು ಅಧಿಕಾರವನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟು ಕೆಲಸ ಮಾಡಿದ್ದೇನೆ ಎಂದು ಖೂಬಾ ತಿಳಿಸಿದ್ದಾರೆ.

Share This Article

You cannot copy content of this page