
ಕನ್ನಡ ಬಿಂಬ, ಬೀದರ್
ಮಾರುಕಟ್ಟೆಯಲ್ಲಿ ಎಲ್ಲ ಸಾಮಾನುಗಳ ಅಂಗಡಿಗಳಿವೆ. ಆದರೆ, ಪುಸ್ತಕದ ಅಂಗಡಿ ಎಲ್ಲಿವೆ ?, ಯಾಕೆ ಪುಸ್ತಕ ತೋರಿಸುತ್ತಿಲ್ಲ ?, ಪುಸ್ತಕ ಸಂಸ್ಕøತಿಯನ್ನು ಬಿಂಬಿಸುವ ಕೆಲಸ ಯಾಕೆ ಅಗುತ್ತಿಲ್ಲ ಎಂಬ ಗಂಭೀರ ಪ್ರಶ್ನೆಗಳನ್ನು ವೀರಲೋಕ ಪುಸ್ತಕಸಂತೆಯ ರೂವಾರಿ, ವೀರಕಪುತ್ರ ಶ್ರೀನಿವಾಸ ಅವರು ಕನ್ನಡಿಗರ ಮುಂದಿಟ್ಟಿದ್ದಾರೆ.
ಬೀದರ್ ನಗರದ ಸಾಯಿ ಶಾಲಾ ಆವರಣದಲ್ಲಿ ಜ. 24 ರಂದು ನಡೆದ ವೀರಲೋಕ ಪುಸ್ತಕ ಸಂತೆಯ ಉದ್ಘಾಟನಾ ಸಮಾರಂಭದಲ್ಲಿ ಸೇರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ವೀರಕಪುತ್ರ ಶ್ರೀನಿವಾಸ ಅವರು ಈ ಪ್ರಶ್ನೆಗಳನ್ನು ಪ್ರಸ್ತಾಪಿಸಿದರು. ಮಾರುಕಟ್ಟೆಯಲ್ಲಿ ಇರದ ವಸ್ತು ಮಾರಾಟವಾಗುವುದದರೂ ಹೇಗೆ ಎಂದ ಅವರು, ಕನ್ನಡ ಪುಸ್ತಕ ಮಳಿಗೆಗಳ ಅಗತ್ಯವನ್ನು ಒತ್ತಿ ಹೇಳಿದರು. ಕನ್ನಡ ಪುಸ್ತಕ ಮಾರಾಟವಾಗಲ್ಲ ಎಂಬ ಭಾವನೆ ಎಲ್ಲರಲ್ಲಿದೆ. ಇದು ಕನ್ನಡ ಪುಸ್ತಕ ಸಂಸ್ಕøತಿಯ ಬೆಳವಣಿಗೆಗೆ ಹಿನ್ನಡೆಯುಂಟು ಮಾಡುತ್ತಿದೆ ಎಂದು ವಿಷಾದಿಸಿದರು.
ಹಿಂದೆ ಅರಸರ ಕಾಲದಲ್ಲಿ ಸಾಹಿತಿಗಳಿಗೆ, ಕಲಾವಿದರಿಗೆ ರಾಜಾಶ್ರಯವಿತ್ತು. ಈಗ ಅರಸೊತ್ತಿಗೆ ಇಲ್ಲ. ಆದರೂ, ಸಾಹಿತಿಗಳು ರಾಜಾಶ್ರಯವನ್ನು ನಂಬಿ ಕೂಡುವಂತಹ ಸ್ಥಿತಿ ಮುಂದುವರೆದಿದೆ ಎಂದು ಶ್ರೀನಿವಾಸ ಹೇಳಿದರು.
ಸಾವಿರ ಪ್ರತಿಗಳನ್ನೂ ಮಾರಾಟ ಮಾಡಲು ಕಷ್ಟವಾಗುವಂತಹ ಸ್ಥಿತಿ ಯಾಕೆ ಇದೆ ಎಂದು ಪ್ರಶ್ನಿಸಿದರು. ಪುಸ್ತಕ ಸಂಸ್ಕøತಿಯನ್ನು ಬಿಂಬಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯದಿರುವುದೇ ಇದಕ್ಕೆ ಕಾರಣವಾಗಿರಬಹುದು. ಪುಸ್ತಕ ಕೊಳ್ಳುವವರಿಲ್ಲ, ಓದುವವರೂ ಇಲ್ಲ ಎಂಬ ಭಾವನೆ ನೆಲೆಯೂರಿದೆ. ಆದರೆ,ಇದು ನಿಜವಲ್ಲ ಎನ್ನುವುದನ್ನು ಹಿಂದಿನ ಮೂರೂ ವಿರಲೋಕ ಪುಸ್ತಕ ಸಂತೆಗಳು ಸಾಬೀತುಪಡಿಸಿವೆ. ಪುಸ್ತಕ ಸಂತೆಯೊಂದರಲ್ಲಿ 3 ಕೋಟಿ ರೂ. ಮೌಲ್ಯದ ಪುಸ್ಕಕ ಮಾರಾಟವಾಗಿವೆ ಎಂದು ವೀರಲೋಕ ಶ್ರೀನಿವಾಸ ಹೇಳಿದರು.
ಕನ್ನಡದ ಲೇಖಕರು ಸರಕಾರ ಮತ್ತು ಸರಕಾರದ ಸಂಸ್ಥೆಗಳು ಪುಸ್ತಕ ಕೊಳ್ಳುವುದನ್ನು ಎದುರು ನೋಡುವ ಸ್ಥಿತಿ ಉಳಿದಿರುವುದು ಬೇಸರದ ಸಂಗತಿ. ಸರಕಾರ ಪುಸ್ತಕ ಖರೀದಿ ಮಾಡಿದರಷ್ಟೇ ಉಳಿಯಬಹುದು ಎಂಬ ಭಾವನೆಯೂ ಇದೆ. ಈ ಮನಸ್ಥಿತಿಯಿಂದ ಹೊರಗೆ ಬರಬೇಕಾಗಿದೆ. ಆದಾಯದ ಮೂಲಗಳನ್ನು ಹುಡುಕಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕ ಸಂತೆ ಹುಟ್ಟಿಕೊಂಡಿದೆ. ಹಿಂದಿನ ಮೂರೂ ಪುಸ್ತಕ ಸಂತೆಗಳು ಅದ್ಭುತ ಯಶಸ್ಸು ಪಡೆದಿವೆ. ಬೀದರಿನಲ್ಲಿ ನಡೆಯುತ್ತಿರುವ ನಾಲ್ಕನೇ ಸಂತೆಯ ಸಂಭ್ರಮ ಖುಷಿಯುಂಟು ಮಾಡಿದೆ ಎಂದು ಶ್ರೀನಿವಾಸ ಅವರು ಹೇಳಿದರು.
ಪುಸ್ತಕ ಸಂತೆ ಆಯೋಜನೆಯ ಹಿಂದೆ ಸ್ನೇಹಿತರಾದ ಗುರುನಾಥ ರಾಜಗೀರಾ ಅವರ ಶ್ರಮ ಹೆಚ್ಚಿದೆ. ಭಾಲ್ಕಿ ಹಿರೇಮಠ, ಜಿಲ್ಲಾ ಕಸಾಪ ಅದ್ಯಕ್ಷ ಸುರೇಶ ಚೆನಶೆಟ್ಟಿ ಅವರ ಶ್ರಮ, ಸಹಕಾರ ಹೆಚ್ಚಿದೆ ಎಂದು ಶ್ರೀನಿವಾಸ ಅವರು ಶ್ಲಾಘಿಸಿದರು. ಬೀದರ್ ಪುಸ್ತಕ ಸಂತೆಗೆ ಬೆಂಗಳೂರಿನಿಂದ 50 ಕ್ಕೂ ಹೆಚ್ಚು ಪ್ರಕಾಶಕರು ಬಂದಿದ್ದಾರೆ. ಲೇಖಕರೂ ಬಂದಿದ್ದಾರೆ. ಪುಸ್ತಕ ಮಾರಾಟವಾಗುವ ಬಗ್ಗೆ ಮುಂಚೆ ಸ್ವಲ್ಪ ಮಟ್ಟಿಗೆ ಅನುಮಾನ ಇತ್ತು. ಆದರೆ, ಎಲ್ಲ ಪ್ರಕಾಶಕರು ಉತ್ಸಾಹದಿಂದ ಇಲ್ಲಿಗೆ ಬಂದಿದ್ದಾರೆ. ಎಲ್ಲರಲ್ಲೂ ಬೀದರ್ ನಮ್ಮದು ಎಂಬ ಭಾವನೆ ಇದೆ. ಈ ಭಾವನೆಯೇ ಎಲ್ಲರೂ ಇಲ್ಲಿ ಸೇರುವಂತೆ ಮಾಡಿದೆ ಎಂದು ಹೇಳಿದರು.
ಶ್ರೀನಿವಾಸ ಅವರು ಭಾಲ್ಕಿ ಹಿರೇಮಠದ ಕನ್ನಡ ಕಾರ್ಯವನ್ನು ಕೊಂಡಾಡಿದರು. ಅನಾಥ ಮಕ್ಕಳಿಗೆ ಆಶ್ರಯ, ಅನ್ನ, ಅಕ್ಷರ ನೀಡುತ್ತಿರುವುದನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವನ್ನು ಕೊಂಡಾಡಿದರು.
ಪುಸ್ತಕ ಸಂತೆಯು ಹೊಸ ಬದಲಾವಣೆಗೆ ಕಾರಣವಾಗಬೇಕು. ಪುಸ್ಕತ ಸಂಸ್ಕøತಿ ಬೆಳೆಯಬೇಕು. ಆಗಲೇ ಎಲ್ಲರ ಶ್ರಮ ಸಾರ್ಥಕವಾಗುತ್ತದೆ. ಇದನ್ನು ಸಾಧ್ಯವಾಗಿಸುವ ಹೊಣೆ ಎಲ್ಲ ಕನ್ನಡದ ಮನಸ್ಸುಗಳ ಮೇಲಿದೆ ಎಂದರು.
ಪುಸ್ತಕ ಸಂತೆ ಉದ್ಘಾಟಿಸಿದ ಹೆಸರಾಂತ ವಿದ್ವಾಂಸ ಪ್ರೊ. ಬರಗೂರು ರಾಮಚಂದ್ರಪ್ಪ ಸೇರಿದಂತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎಲ್ಲ ಗಣ್ಯರು ವೀರಕಪುತ್ರ ಶ್ರೀನಿವಾಸ ಅವರ ಕಾರ್ಯವನ್ನು ಕೊಂಡಾಡಿದರು. ಪುಸ್ತಕ ಕೊಳ್ಳಲು ಅಂಗಡಿಗೆ ಹೋಗುವುದು ಬೇರೆ. ಇಲ್ಲಿ ಜನರ ಬಳಿಯೇ ಪುಸ್ತಕ ಬಂದಿವೆ. ಜನಾಶ್ರಯಕ್ಕೆ ಪುಸ್ತಕ ಉದ್ಯಮ ಬರುತ್ತಿದೆ. ಪುಸ್ತಕ ಸಂಸ್ಕøತಿ ವಿಸ್ತಾರವಾಗುತ್ತಿದೆ. ಇದನ್ನು ಸಾಧ್ಯವಾಗಿಸುತ್ತಿರುವವರು ವೀರಲೋಕದ ಶ್ರೀನಿವಾಸ ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಬಣ್ಣಿಸಿದರು.
ಭಾಲ್ಕಿ ಹಿರೇಮಠದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್, ನಟ ನೆನಪಿರಲಿ ಪ್ರೇಮ, ನಟಿ ಸುಲಕ್ಷಾ, ಬಾಬುರಾವ ಮಲ್ಕಾಪುರೆ ಮತ್ತಿತರ ಗಣ್ಯರು, ಪ್ರಮುಖರು ವೇದಿಕೆ ಮೇಲಿದ್ದರು. ಕಸಾಪ ಅದ್ಯಕ್ಷ ಸುರೇಶ ಚೆನಶೆಟ್ಟಿ ಸ್ವಾಗತಿಸಿದರು. ಪುಸ್ತಕ ಸಂತೆ ಆಯೋಜಕ ಗುರುನಾಥ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಶಂಕರ ಟೋಕರೆ ನಿರೂಪಿಸಿದರು.


