
ಕನ್ನಡ ಬಿಂಬ, ಬೀದರ್
ಗುಡಿಸಲುರಹಿತ ರಾಜ್ಯ ನಿರ್ಮಾಣ ಮಾಡುವುದಾಗಿ ಅಧಿಕಾರಸ್ಥರು ಹೇಳುತ್ತಲೇ ಇದ್ದಾರೆ. ಆದರೆ, ಔರಾದ್ ಪಟ್ಟಣದಲ್ಲಿ ರಸ್ತೆ ಬದಿಯಲ್ಲಿ 40 ವರ್ಷಗಳಿಂದ ಬಟ್ಟೆ, ಪ್ಲಾಸ್ಟಿಕ್ ಹೊದಿಕೆ ಇರುವ ಸಣ್ಣ ಸಣ್ಣ ಜೋಪಡಿಗಳಲ್ಲಿ ವಾಸಿಸುತ್ತಿರುವ ಅಲೆಮಾರಿ, ಅರೆಅಲೆಮಾರಿ ಸಮುದಾಯಕ್ಕೆ ಮಾತ್ರ ಬೆಚ್ಚನೆಯ ಸೂರು ಈಗಲೂ ಕನಸಾಗಿಯೇ ಉಳಿದಿದೆ. ರಾಜಕೀಯ ಒತ್ತಡ ರೂಪದ ಬಂಡೆಯು ಈ ಅಲೆಮಾರಿಗಳ ಕನಸಿನ ಮನೆಯನ್ನು ಚೂರು ಚೂರು ಮಾಡಿದೆ.
ನಾಲ್ಕೈದು ವರ್ಷಗಳ ಹಿಂದೆ ಜಿಲ್ಲಾ ಆಡಳಿತವು ಈ ಸಮುದಾಯಕ್ಕೆ ನಿವೇಶನ ಕೊಡುವುದಕ್ಕಾಗಿಯೇ ಜಮೀನು ಕಾಯ್ದಿರಿಸಿದಾಗ ಬೆಚ್ಚನೆಯ ಮನೆ ಹೊಂದುವ ಕನಸಿಗೆ ರೂಪ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಈ ಕಡು ಬಡವರು, ಪುನ: ನಿರಾಶರಾಗಿದ್ದಾರೆ. ಜನವರಿ 19 ರಿಂದ ಔರಾದ್ ತಹಸೀಲ್ ಕಚೇರಿಯ ಬಳಿಯೇ ಹಗಲೂರಾತ್ರಿ ಧರಣಿ ನಡೆಸುತ್ತಿದ್ದಾರೆ.
ಚಿಂದಿ ಆಯುವ, ಊರೂರು ಸುತ್ತಿ ಬಳೆ, ಪಿನ್ನು, ಕನ್ನಡಿ, ಬಾಚಣಿಕೆ, ಬಲೂನುಗಳನ್ನು ಮಾರಾಟ ಮಾಡುವ, ಹೋಟೆಲ್ಗಳಲ್ಲಿ ಕೆಲಸ ಮಾಡುವ ಈ ಕಡುಬಡವರತ್ತ ಯಾರೂ ನೋಡುತ್ತಿಲ್ಲ. ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿ, ಧರಣಿ ಕೊನೆಗೊಳಿಸಲು ಯತ್ನಿಸಿದ್ದಾರೆ. ಆದರೆ, ಹಿರಿಯ ಅಧಿಕಾರಿಗಳು, ಕ್ಷೇತ್ರದ ಶಾಸಕರು ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಧರಣಿನಿರತರು ನೋವಿನಿಂದ ಹೇಳುತ್ತಾರೆ.
ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಗೋವಿಂದರೆಡ್ಡಿ ಅವರು 2022 ರ ಡಿಸೆಂಬರ್ 27 ರಂದು ಔರಾದ್ ಪಟ್ಟಣದ ಸರ್ವೆ ಸಂಖ್ಯೆ 205 ರಲ್ಲಿ 2 ಎಕರೆ ಜಮೀನನ್ನು ಈ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ನಿವೇಶನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಿದ್ದರು. ಈ ಜಮೀನಿನ ಪಹಣಿಯಲ್ಲಿ ಇದನ್ನು ಸ್ಪಷ್ಟವಾಗಿ ದಾಖಲಿಸಲಾಗಿದೆ.
ಇದಕ್ಕೂ ಹಿಂದೆ 2020 ರಲ್ಲಿ ಸರ್ವೆ ಸಂಖ್ಯೆ 183 ರಲ್ಲೂ ಈ ಸಮುದಾಯಕ್ಕೆ ನಿವೇಶನ ನೀಡುವುದಕ್ಕಾಗಿ 2 ಎಕರೆ ಜಮೀನು ಕಾಯ್ದಿರಿಸಲಾಗಿದೆ. ಪಹಣಿಯಲ್ಲೂ ಇದನ್ನು ದಾಖಲಿಸಲಾಗಿದೆ. ಆದರೆ, ಜಮೀನು ಅಳತೆ ಮಾಡಿಸಿ, ಹದ್ದುಬಸ್ತು ಗುರುತಿಸಿ, ಕಾಯ್ದಿರಿಸಿದ ಉದ್ದೇಶಕ್ಕಾಗಿ ಬಳಸುವ ಕಾರ್ಯ ಆಗಿಲ್ಲ ಎನ್ನುತ್ತಾರೆ, ಈ ಅಲೆಮಾರಿ ಸಮುದಾಯದ ಪರವಾಗಿ ಹೋರಾಟ ಮಾಡುತ್ತಿರುವ ಬದುಕಿಗಾಗಿ ಭೂಮಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅದ್ಯಕ್ಷ ರಾಹುಲ್ ಖಂದಾರೆ.
ನಿವೇಶನಕ್ಕಾಗಿ ಇದೇ ಸಮುದಾಯದ ನಾಗನಾಥ ವಾಕೋಡೆ ಅವರ ನೇತೃತ್ವದಲ್ಲಿ 2018 ರಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಇದರ ಫಲವಾಗಿಯೇ 2020 ರಲ್ಲಿ ಜಮೀನು ಕಾಯ್ದಿರಿಸಲಾಗಿತ್ತು. ನಂತರ 2022 ರಲ್ಲಿ ಮತ್ತೊಂದು ಕಡೆ ಜಮೀನು ಗುರುತಿಸಿ ಕಾಯ್ದಿರಿಸಲಾಗಿತ್ತು. ಎರಡೂ ಜಮೀನುಗಳ ಪಹಣಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆದರೆ, ಸರ್ವೆ ನಂ. 183 ರಲ್ಲಾಗಲಿ, ಸರ್ವೆ ಸಂಖ್ಯೆ 205 ರಲ್ಲಾಗಲಿ ಜಮೀನು ಅಭಿವೃದ್ಧಿಪಡಿಸಿ, ನಿವೇಶನ, ಮನೆ ನಿರ್ಮಿಸಿಕೊಡುವ ಕಾರ್ಯ ನಡೆಯುತ್ತಿಲ್ಲ ಎಂದು ರಾಹುಲ್ ಖಂದಾರೆ ಬೇಸರದಿಂದ ಹೇಳುತ್ತಾರೆ.
ಸರ್ವೆ ಸಂಖ್ಯೆ 183 ರಲ್ಲಿರುವ ಜಮೀನು ಪಟ್ಟಣಕ್ಕೆ ಹತ್ತಿಕೊಂಡಿದೆ. ಸರಕಾರಿ ಐಟಿಐ ಕಾಲೇಜು, ದೇವರಾಜ ಅರಸು ಭವನ, ವಿದ್ಯಾರ್ಥಿ ನಿಲಯ, ಟ್ರೀಪಾರ್ಕ್ಗೂ ಇಲ್ಲಿಯೇ ಜಮೀನು ಕಾಯ್ದಿರಿಸಲಾಗಿದೆ. ಈ ಎಲ್ಲ ಬೆಳವಣಿಗೆಯಿಂದಾಗಿಯೇ ಅಲೆಮಾರಿಗಳಿಗೆ ಇಲ್ಲಿ ನಿವೇಶನ ನೀಡುವುದಕ್ಕೆ ಕೆಲವರು ಒಳಗಿಂದೊಳಗೆ ವಿರೋಧಿಸುತ್ತಿದ್ದಾರೆ. ಕೂಲಿ ಮಾಡಿ ಬದುಕುವ ಅಲೆಮಾರಿಗಳು ಪಟ್ಟಣದಿಂದ ಸ್ವಲ್ಪವೇ ದೂರದಲ್ಲಿರುವ ಬೆಲೆ ಬಾಳುವ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುವದನ್ನು ಕೆಲವರು ಬಯಸುತ್ತಿಲ್ಲ. ಪ್ರಭಾವಿ ರಾಜಕಾರಣಿಯೊಬ್ಬರೂ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ವೆ ಸಂಖ್ಯೆ 183 ರ ಬದಲು ಪಟ್ಟಣದಿಂದ ದೂರದಲ್ಲಿರುವ ಬೇರೊಂದು ಜಮೀನನ್ನು ಈ ಅಲೆಮಾರಿಗಳಿಗೆ ನೀಡುವ ಚಿಂತನೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಔರಾದ್ ತಹಸೀಲ್ದಾರರು 2025 ರ ಏಪ್ರಿಲ್ 19ರಂದು ಬೀದರ್ ಸಹಾಯಕ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಔರಾದ್ ಹೋಬಳಿಯ ಮಹಾಡೋಣಗಾಂವ್ ಗ್ರಾಮದ ಸರ್ವೆ ಸಂಖ್ಯೆ 105 ರಲ್ಲಿರುವ ಸರಕಾರಿ ಗಾಯರಾಣ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ ನಿವೇಶನಕಕ್ಕಾಗಿ ಕಾಯ್ದಿರಿಸುವ ಪ್ರಸ್ತಾವ ಮಾಡಲಾಗಿದೆ.
ಔರಾದ್ ಪಟ್ಟಣದಲ್ಲಿರುವ ಪರಿಶಿಷ್ಟ ಜಾತಿಗೆ ಸೇರಿದ 55 ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ 36 ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಕುಟುಂಬಗಳ ನಿವೇಶನಕ್ಕಾಗಿ ಮಹಾಡೋಣಗಾಂವ್ ಗ್ರಾಮದ ಬಳಿ ಇರುವ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಹೆಸರಿನಲ್ಲಿ ಕಾಯ್ದಿರಿಸಬಹುದು ಎಂದು ಈ ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ.
ಇದಕ್ಕೂ ಹಿಂದೆ ಅಂದರೆ, 2022 ರ ಸೆಪ್ಟೆಂಬರ್ 8 ರಂದು ಬೀದರ್ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ನಿವೇಶನ ಕೊಡುವ ಚರ್ಚೆ ನಡೆದಿತ್ತು. ಔರಾದ್ ಪಟ್ಟಣಕ್ಕೆ ಹತ್ತಿಕೊಂಡಿಯೇ ಇರುವ ತಾಂಡಾ ಹತ್ತಿರದ (ಸರ್ವೆ ಸಂಖ್ಯೆ 183) ಜಮೀನನ್ನು ಈ ಹಿಂದೆ ಅಲೆಮಾರಿ, ಅರೆಅಲೆಮಾರಿ ಜನಾಂಗದವರ ನಿವೇಶನಕ್ಕೆ ಕಾಯ್ದಿರಿಸಲಾಗಿತ್ತು. ಆದರೆ, ತಕರಾರು ಇರುವುದು ಕಂಡು ಬಂದಿದ್ದರಿಂದ ಬೇರೆ ಕಡೆ ಜಮೀನು ಗುರುತಿಸಬೇಕು ಎಂದು ಜಿಲ್ಲಾಧಿಕಾರಿಯವರು ಸ್ವತ: ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಬೇರೆಡೆ ನಿವೇಶನ ಬೇಡ. ಹಿಂದೆ ಕಾಯ್ದಿರಿಸಲಾಗಿದ್ದ ಸರ್ವೆ ಸಂಖ್ಯೆ 183 ರಲ್ಲಿಯೇ ನಿವೇಶನ ಕೊಡಬೇಕು ಎನ್ನುವುದು ಈ ಅಲೆಮಾರಿಗಳ ಏಕೈಕ ಬೇಡಿಕೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬೇಡಿಕೆಯನ್ನು ಮನ್ನಿಸುತ್ತಿಲ್ಲ
ಐದು ವರ್ಷಗಳ ಹಿಂದೆ ಕೈಗೊಳ್ಳಲಾಗಿದ್ದ ತೀರ್ಮಾನದ ಪ್ರಕಾರ ನಮಗಾಗಿ ಕಾಯ್ದಿರಿಸಿದ ಜಮೀನನ್ನು ನಮಗೇ ನೀಡಬೇಕು ಎಂಬ ಈ ಅಲೆಮಾರಿಗಳ ನೋವಿನಿಂದ ಕೂಡಿದ ಕೂಗು ಅಧಿಕಾರಸ್ಥರ ಕಿವಿಗೆ ತಲುಪಿದರೂ ಹೃದಯಕ್ಕೆ ತಟ್ಟುತ್ತಿಲ್ಲ. ಅಧಿಕಾರಸ್ಥರ ಮನಸ್ಸು ಕಲ್ಲಾಗಿದೆ, ಯಾರದೋ ಪ್ರಭಾವಕ್ಕೆ ಒಳಗಾಗಿ ಕರ್ತವ್ಯ ಮರೆಯುವಂತೆ ಮಾಡಿದೆ ಎನ್ನುತ್ತಾರೆ, ಈ ಅಲೆಮಾರಿಗಳು.
ಜಮೀನು ಕಾಯ್ದಿರಿಸಿ, ಸ್ವತ: ಜಿಲ್ಲಾಧಿಕಾರಿಯವರೇ ಆದೇಶ ಹೊರಡಿಸಿದ್ದಾರೆ. ಆದೇಶ ಹೊರಡಿಸುವಾಗ ಯಾವುದೇ ತಕರಾರು ಇದ್ದಿರಲಿಲ್ಲ. ನಂತರ ಯಾರು ತಕರಾರು ಮಾಡಿದರು, ಯಾಕೆ ಮಾಡಿದರು ಎನ್ನುವುದು ಸದ್ಯದ ಪ್ರಶ್ನೆ. ತಕರಾರು ಎತ್ತಿದವರು ಯಾರು ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು. ತಕರಾರು ಎತ್ತಿರುವವರು ಸರಕಾರವನ್ನು, ಜಿಲ್ಲಾ ಆಡಳಿತದ ತೀರ್ಮಾನವನ್ನು ಪ್ರಭಾವಿಸುವಷ್ಟು ದೊಡ್ಡವರಾಗಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆ.
ಚಳಿ, ಮಳೆ, ಬಿಸಿಲು ಗಾಳಿಯ ರಕ್ಷಣೆ ಇಲ್ಲದೆ ಬೀದಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಮೂಲ ಸೌಕರ್ಯ ಕಲ್ಪಿಸುವುದು ಸರಕಾರದ ಜವಾಬ್ದಾರಿ. ಸರಕಾರ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಲು ಮುಂದಾಗಿದೆ. ಆದರೆ, ತಕರಾರು ನೆಪದಲ್ಲಿ ಅಲೆಮಾರಿ ಸಮುದಾಯವನ್ನು ಉತ್ತಮ ಜೀವನ ನಡೆಸುವ ಅವಕಾಶದಿಂದ ವಂಚಿತಗೊಳಿಸಲು ಯತ್ನಿಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ, ಈ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿರುವವರು.
ಒಂದು ವಾರದಿಂದ ಹಗಲೂರಾತ್ರಿ ಧರಣಿ ನಡೆಸುತ್ತಿರುವ ಅಲೆಮಾರಿ ಕುಟುಂಬಗಳು, ತಮ್ಮ ಮೂಲಭೂತ ಹಕ್ಕಿಗಾಗಿ ಹೋರಾಟ ಮುಂದುವರಿಸಿದ್ದಾರೆ. ಮನೆ ಕಟ್ಟಲು ಜಾಗ ಕೇಳುತ್ತಿರುವುದು ಅಪರಾಧವೇ ? ಮಂಜೂರಾದ ಭೂಮಿಯಲ್ಲಿಯೇ ನಿವೇಶನ ರಚಿಸಿ ಎಂದು ಕೇಳುವುದು ತಪ್ಪೇ ಎನ್ನುವುದು ಧರಣಿನಿರತರ ಪ್ರಶ್ನೆ.
ಧರಣಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಕ್ರಮದತ್ತ ಈಗ ಎಲ್ಲರ ದೃಷ್ಟಿಯೂ ನೆಟ್ಟಿದೆ.


