Ad imageAd image

ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ- ಕಾಂಗ್ರೆಸ್ ಶಾಸಕ

Kannada Bimba Team
2 Min Read

 

ಕನ್ನಡ ಬಿಂಬ, ಬೀದರ್

ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರು ಕೆಡಿಪಿ ಸಭೆಯಲ್ಲಿಯೇ ಕೈ ಕೈ ಮಿಲಾಯಿಸಿದ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಗೆ ಬೀದರ್ ಜಿಲ್ಲಾ ಪಂಚಾಯತಿ ಸಭಾಂಗಣ ಸಾಕ್ಷಿಯಾಯಿತು.

ಇಬ್ಬರೂ ನಾಯಕರು ಏರಿದ ಧ್ವನಿಯಲ್ಲಿ ಮಾತನಾಡಿದರು. ಒಬ್ಬರು ಮತ್ತೊಬ್ಬರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದರು. ವಾಗ್ವಾದದ ನಡುವೆ ಭೀಮರಾವ ಪಾಟೀಲ್ ಅವರು ಸಿದ್ದು ಪಾಟೀಲರ ಮೇಲೆ ಏರಿಹೋದ, ಇಬ್ಬರೂ ನಾಯಕರು ಕೈ ಕೈ ಮಿಲಾಯಿಸಿದ ಘಟನೆಯೂ ನಡೆಯಿತು. ಡಾ. ಸಿದ್ದು ಪಾಟೀಲ್ ಮತ್ತು ಭೀಮರಾವ ಪಾಟೀಲರು ಬಯ್ದಾಡಿಕೊಂಡಿರುವ, ಕೈ ಕೈ ಮಿಲಾಯಿಸಿದ ದೃಶ್ಯಗಳಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಆರೋಪ, ಪ್ರತ್ಯಾರೋಪಗಳ ನಡುವೆ, ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋದ ಘಟನೆಯಿಂದಾಗಿ ಇಡೀ ಸಭಾಂಗಣದಲ್ಲಿ  ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸ್ ಅಧಿಕಾರಿಗಳು ಇಬ್ಬರೂ ನಾಯಕರನ್ನು ತಡೆದು, ಪರಿಸ್ಥಿತಿಯನ್ನು ನಿಯಂತ್ರಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೂ ವೇದಿಕೆಯಿಂದ ಕೆಳಗಿಳಿದು, ಈ ನಾಯಕರನ್ನು ಸುಮ್ಮನಾಗಿಸಲು ಯತ್ನಿಸಿದರು. ಗದ್ದಲ ಹೆಚ್ಚಿದ್ದರಿಂದ ಸಚಿವ ಖಂಡ್ರೆ ಅವರು, ಕೆಡಿಪಿ ಸಭೆಯನ್ನು ಮುಂದೂಡಿದ್ದಾಗಿ ಪ್ರಕಟಿಸಿದರು.

2023 ರ  ವಿಧಾನಸಭಾ ಚುನಾವಣೆಯ ನಂತರ ಹುಮನಾಬಾದ್ ಕ್ಷೇತ್ರದಲ್ಲಿ ರಾಜಕೀಯ ಬಿಸಿ ಹೆಚ್ಚಿದೆ. ಶಿಷ್ಟಾಚಾರ ಉಲ್ಲಂಘನೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಸಭೆ, ಸಮಾರಂಭಗಳಲ್ಲಿ, ಬಹಿರಂಗವಾಗಿಯೇ ಬಯ್ದಾಡಿಕೊಳ್ಳುವ, ಒಬ್ಬರು ಮತ್ತೊಬ್ಬರಿಗೆ ಸವಾಲು ಹಾಕುವ ಘಟನೆಗಳು ನಡೆಯುತ್ತಲೇ ಇವೆ. ಹಲವು ಬಾರಿ ಈ ನಾಯಕರು ತೋಳು ಮೇಲಿರಿಸಿಕೊಂಡು ಜಗಳಕ್ಕೆ ಮುಂದಾದ ಘಟನೆಗಳು ನಡೆದಿವೆ.

ಜನವರಿ 5 ರಂದು ನಡೆದ ಕೆಡಿಪಿ ಸಭೆಯಲ್ಲಿ ಬಿಜೆಪಿಯ ಸಿದ್ದು ಪಾಟೀಲ್ ಮತ್ತು ಕಾಂಗ್ರೆಸ್‍ ನ ಭೀಮರಾವ ಪಾಟೀಲ್ ನಡುವೆ ಆರೋಪ, ಪ್ರತ್ಯಾರೋಪಗಳು ನಡೆದಿದ್ದವು. ಭೀಮರಾವ ಪಾಟೀಲರ ಸಹೋದರ, ಎಂಎಲ್‍ಸಿ ಡಾ.ಚಂದ್ರಶೇಖರ ಪಾಟೀಲ್ ಅವರೂ ಇದರಲ್ಲಿ ಭಾಗಿಯಾಗಿದ್ದರು. ಮಾತಿಗೆ ಮಾತು ಬೆಳೆದು ಶುರುವಾದ ಏಕವಚನ ಬಳಕೆಯು ಆವಾಚ್ಯ ಪದಗಳ ಪ್ರಯೋಗದ ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಎಂ.ಜಿ. ಮುಳೆ, ಕರ್ನಾಟಕ ಮಿನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಲಾ ಬಿ.ನಾರಾಯಣರಾವ, ಜಿಲ್ಲಾ ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ ಬದೋಲೆ, ಎಸ್‍ಪಿ ಪ್ರದೀಪ ಗುಂಟಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಸಚಿವರ ಮನವಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಾಂತಿ, ಸೌಹಾರ್ದ ಮತ್ತು ಒಗ್ಗಟ್ಟು ಅತ್ಯವಶ್ಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ಜಿಪಂ ಸಭಾಂಗಣದಲ್ಲಿ ನಡೆದ ಅಹಿತಕರ ಘಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇದ ಮರೆತು, ಜನಹಿತವನ್ನು ಕೇಂದ್ರಬಿಂದುವಾಗಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. ಶಾಂತಿ ಮತ್ತು ಪರಸ್ಪರ ಸಹಕಾರದ ಮೂಲಕ ಮಾತ್ರ ಬೀದರ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದು ಅವರು ತಿಳಿಸಿದ್ದಾರೆ.

 

Share This Article

You cannot copy content of this page