
ಮಾರುತಿ ಸೋನಾರ್, ಬೀದರ್
ಸಹಸ್ರಾರು ಭಕ್ತರ ಬದುಕಿನಲ್ಲಿ ಬೆಳಕು ತುಂಬಿ ಅರಿವಿನ ದಾರಿ ತೋರಿಸಿದ್ದ ಬೀದರ್ ತಾಲೂಕಿನ ಬಗದಲ್ ಗ್ರಾಮದ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜ ಸಂಸ್ಥಾನದ ಪೀಠಾಧಿಪತಿ, ಪರಮಪೂಜ್ಯ ಶ್ರೀಸದ್ಗುರು ಶ್ರೀಪತಾನಂದ ಮಹಾರಾಜರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರುವಾರ (ಏಪ್ರಿಲ್ 2) ಸಂಜೆ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣದ ಸಹಸ್ರಾರು ಭಕ್ತರು ತಮ್ಮ ಬದುಕು ಬೆಳಗಿದ ಗುರುವಿಗೆ ಅಂತಿಮ ನಮನ ಸಲ್ಲಿಸಿದರು.
ವಯೋಸಹಜ ಕಾರಣದಿಂದಾಗಿ ಸದ್ಗುರುಗಳು ಬುಧವಾರ (ಏಪ್ರಿಲ್-01) ವಿಧಿವಶರಾಗಿದ್ದರು. ಗುರುವಾರ ಮಧ್ಯಾಹ್ನದವರಗೆ ಸಂಸ್ಥಾನದಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ತಮ್ಮ ಗುರುಗಳನ್ನು ಸ್ಮರಿಸಿ ಕಂಬಿನಿ ಮಿಡಿದರು.
ಸದಾ ಜೀವಂತಿಕೆ ತುಂಬಿಕೊಂಡಿರುತ್ತಿದ್ದ ಸಂಸ್ಥಾನದಲ್ಲಿ ಬುಧವಾರ ಒಮ್ಮೆಗೆ ಮೌನ ಆವರಿಸಿತು. ಪರಮಪೂಜ್ಯರು ಲೌಕಿಕ ಲೋಕ ತ್ಯಜ್ಯಿಸಿದ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಭಕ್ತರ ಹೃದಯದಲ್ಲಿ ಆಳವಾದ ಶೋಕ ಮಡುಗಟ್ಟಿತು. ಬುಧವಾರ ರಾತ್ರಿಯೇ ಬೇರೆಬೇರೆ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದರು. ಅಶ್ರುಧಾರೆಯೊಂದಿಗೆ ಗುರುಗಳಿಗೆ ಅಂತಿಮ ನಮನ ಸಲ್ಲಿಸಿದರು. ಗುರುಗಳ ಗುಣಗಾನ ಮಾಡಿದರು. ಗುರುಗಳ ದರ್ಶನದಿಂದ ಬದುಕು ಬದಲಾಗಿದ್ದನ್ನು ನೆನಪಿಸಿಕೊಂಡರು. ಗುರುಗಳ ಸಾನಿಧ್ಯದಲ್ಲಿ ತಾವು ಕಂಡಿದ್ದನ್ನು, ಅನುಭವಿಸಿದ್ದನ್ನು ಪರಸ್ಪರ ಹಂಚಿಕೊಂಡರು.
ಧರ್ಮ, ಭಕ್ತಿ ಮತ್ತು ಮಾನವೀಯ ಮೌಲ್ಯಗಳ ಜೀವಂತ ಪ್ರತಿರೂಪವಾಗಿದ್ದ ಪೂಜ್ಯರು, ತಮ್ಮ ಜೀವನವನ್ನೇ ಗೀತೆಯ ತತ್ವಗಳೊಂದಿಗೆ ಒಗ್ಗೂಡಿಸಿಕೊಂಡಿದ್ದರು. ಭಗವದ್ಗೀತೆಯ ಆಳವಾದ ಅಧ್ಯಯನ ಮತ್ತು ಅದನ್ನು ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ಹೇಳಿಕೊಡುವ ಅವರ ವಿಶಿಷ್ಟ ಶೈಲಿ, ಭಕ್ತರನ್ನು ಆಕರ್ಷಿಸುತ್ತಿತ್ತು. ಪೂಜ್ಯರ ಗೀತಾ ಪ್ರವಚನ ಕೇಳುವುದಕ್ಕಾಗಿಯೇ ದೂರ ದೂರದ ಊರುಗಳಿಂದ ಭಕ್ತರು ಆಗಮಿಸುತ್ತಿದ್ದರು.
ಸಂಸ್ಥಾನದಲ್ಲಿ ನಡೆಯುತ್ತಿದ್ದ ಉತ್ಸವಗಳು, ವಿಶೇಷ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪೂಜ್ಯರ ಗೀತಾ ಪ್ರವಚನವೇ ಪ್ರಮುಖ ಆಕರ್ಷಣೆಯಾಗಿರುತಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಭಕ್ತರು ಅಪಾರ ಸಂಖ್ಯೆಯಲ್ಲಿ ಬಗದಲ್ ಗ್ರಾಮಕ್ಕೆ ಆಗಮಿಸುತ್ತಿದ್ದರು. ಗೀತೆಯ ಒಂದೊಂದು ಶ್ಲೋಕವನ್ನು ಜೀವನದೊಂದಿಗೆ ಜೋಡಿಸಿ ಹೇಳುತ್ತಿದ್ದ ಪೂಜ್ಯರ ಮಾತುಗಳು ಅನೇಕ ಜನರ ಬದುಕಿಗೆ ಹೊಸ ದಿಕ್ಕು ತೋರಿದ್ದವು.
ಬರುವ ಭಕ್ತರಿಗೆ ವಸತಿ, ದಾಸೋಹ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸಂಸ್ಥಾನದಲ್ಲಿ ಸಮರ್ಪಕವಾಗಿ ಮಾಡಲಾಗುತ್ತಿತ್ತು. ಇದು ಕೇವಲ ಧಾರ್ಮಿಕ ಕೇಂದ್ರ, ಸೇವೆಯ ಸಾರ್ಥಕತೆಯನ್ನು ಸಾರುವ ಮಾನವೀಯ ಮೌಲ್ಯಗಳ ತಾಣವಾಗಿತ್ತು. ಪೂಜ್ಯರ ಮಾರ್ಗದರ್ಶನದಲ್ಲಿ ಸಂಸ್ಥಾನವು ಸೇವೆಯೇ ಸತ್ಯ ಎಂಬ ಸಂದೇಶವನ್ನು ಪ್ರತಿಪಾದಿಸುತ್ತಿತ್ತು.
ಸರಳ ಜೀವನ, ಉನ್ನತ ವಿಚಾರ ಈ ಮಂತ್ರವೇ ಪೂಜ್ಯರ ಬದುಕಿನ ಸಾರವಾಗಿತ್ತು. ಸಾದಾ ಉಡುಪು ಧರಿಸುತ್ತಿದ್ದ ಅವರು ಆಡಂಬರವನ್ನು ಎಂದಿಗೂ ಮೆಚ್ಚಿಕೊಂಡಿರಲಿಲ್ಲ. ಆಭರಣಗಳು, ಕಿರೀಟಗಳು, ವೈಭವ ಇವೆಲ್ಲದಿಂದ ದೂರ ಉಳಿದು, ತ್ಯಾಗ ಮತ್ತು ವಿನಯದ ಮಾರ್ಗದಲ್ಲಿ ನಡೆದ ಮಹಾನ್ ಸಂತರು ಅವರು.
ಭಕ್ತರ ಉದ್ಧಾರಕ್ಕಾಗಿ ಧ್ಯಾನ. ಸಾದಾ ಉಡುಪು. ಸಾದಾ ಜೀವನ. ಆಚಾರ ಸರಳ. ವಿಚಾರ ಶ್ರೇಷ್ಠ. ಭವ್ಯ ಪರಂಪರೆಯುಳ್ಳ ಪೀಠಕ್ಕೆ ಅಧಿಪತಿಯಾಗಿದ್ದರೂ ಆಡಂಬರ ಇಲ್ಲ. ಅಧಿಕಾರಿ-ರಾಜಕಾರಣಿಗಳ ನಂಟಿನಿಂದ ಸದಾ ದೂರ. ಬಡವ ಬಲ್ಲಿದ ಎಂಬ ಭೇದವಿಲ್ಲದೆ ಬಳಿ ಬಂದ ಎಲ್ಲರಿಗೂ ಸರಿ ದಾರಿ ತೋರುವ ನಿಷ್ಕಳಂಕ ಮನಸ್ಸು. ಅಪರೂಪದಲ್ಲಿ ಅಪರೂಪ ಎನ್ನಿಸುವ ವ್ಯಕ್ತಿತ್ವ ಪರಮಪೂಜ್ಯರದ್ದಾಗಿತ್ತು.
ಭಕ್ತರಿಂದ ಏನನ್ನೂ ನಿರೀಕ್ಷಿಸದೆ, ಜಾತಿ, ಮತ, ಬಡವ-ಶ್ರಿಮಂತ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಪೂಜ್ಯರು, ನಿಜವಾದ ಸಮಾನತೆಯ ಸಂದೇಶವನ್ನು ಸಮಾಜಕ್ಕೆ ನೀಡಿದ್ದರು. ಪೂಜ್ಯರ ಉಪದೇಶಗಳು ಮತ್ತು ಜೀವನ ಮೌಲ್ಯಗಳು ಅನೇಕ ಜನರ ಬದುಕಿನಲ್ಲಿ ಬೆಳಕಿನ ಕಿರಣವಾಗಿದ್ದವು. ಅವರ ಮಾತುಗಳು ಕೇವಲ ಪ್ರವಚನವಾಗಿರದೆ, ಬದುಕನ್ನು ರೂಪಿಸುವ ದಾರಿದೀಪವಾಗಿದ್ದವು.
ಪೂಜ್ಯರಿಗೆ ಭಗವದ್ಗೀತೆ ಮೇಲೆ ವಿಶೇಷ ಪ್ರೀತಿ. ಧಾರ್ಮಿಕ ಸಮಾರಂಭಗಳಷ್ಟೇ ಅಲ್ಲ, ದಿನನಿತ್ಯವೂ ಅವರ ಮಾತುಗಳಲ್ಲಿ ಗೀತೆಯ ಸಾರವನ್ನು, ಶ್ಲೋಕಗಳನ್ನು ಕೇಳಬಹುದಿತ್ತು. ಯುದ್ಧದ ಸಂದರ್ಭದಲ್ಲಿ ಹುಟ್ಟಿಕೊಂಡ ಭಗವದ್ಗೀತೆ ಒಂದು ಶ್ರೇಷ್ಠ ಗ್ರಂಥ. ಅದು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದಲ್ಲ, ಸಂಬಂಧಿಸಿದ್ದೂ ಅಲ್ಲ. ಸಮಸ್ತ ಮನುಕುಲದ ಉದ್ಧಾರವೇ ಗೀತಾ ಆಶಯವಾಗಿದೆ. ಉತ್ತಮವಾದ, ಎಲ್ಲ ಕಾಲಕ್ಕೂ ಮಾದರಿ ಎನ್ನಿಸುವ ಬದುಕು ಕಟ್ಟಿಕೊಳ್ಳಲು ಏನೇನು ಬೇಕೋ ಅದೆಲ್ಲವೂ ಭಗವದ್ಗೀತೆಯಲ್ಲಿವೆ. ಪ್ರತಿಯೊಬ್ಬರು ಗೀತೆಯನ್ನು ಓದಬೇಕು, ಅದರಲ್ಲಿರುವ ಸಾರವನ್ನು ಮನನ ಮಾಡಿಕೊಳ್ಳಬೇಕು ಎಂದು ಪರಮಪೂಜ್ಯರು ಸದಾ ಹೇಳುತ್ತಿದ್ದರು.
ಕ್ಷಣಿಕ ಸುಖ ನೀಡುವ ವಸ್ತುಗಳ ಆಕರ್ಷಣೆ ಹೆಚ್ಚಿದೆ. ಪರಮ ಸುಖ ನೀಡುವ ಭಕ್ತಿ, ಅಧ್ಯಾತ್ಮದ ಒಲವು ಕಮ್ಮಿಯಾಗುತ್ತಿದೆ. ಹಣ ಇದ್ದರೆ ಸಾಕು ಎಂಬ ಮನೋಭಾವದಿಂದ ಸ್ವಾರ್ಥ ಹೆಚ್ಚುತ್ತಿದೆ ಎಂದು ಆಗಾಗ ತಮ್ಮ ಬೇಸರವನ್ನು ಹೊರಹಾಕುತ್ತಿದ್ದರು. ಹಣದಿಂದ ಶಾಂತಿ, ನೆಮ್ಮದಿ ಸಿಗಲಾರದು. ನಿಷ್ಕಾಮ ಕರ್ಮ, ಭಕ್ತಿ, ಅಧ್ಯಾತ್ಮ ಮಾರ್ಗದಲ್ಲಿಯೇ ಪರಮ ಸುಖ ಇದೆ. ಶಾಶ್ವತ ಶಾಂತಿಯೂ ಅಲ್ಲಿಯೇ ಇದೆ ಎಂದು ಭಕ್ತರಿಗೆ ತಿಳಿ ಹೇಳುತ್ತಿದ್ದರು.
ಹೋಟೆಲ್ ನಲ್ಲಿ ಅಡುಗೆಯಾತ ಸಿಹಿ ತಿಂಡಿ ತಯ್ಯಾರಿಸುತ್ತಾನೆ. ಅದೇ ಸಾಮಗ್ರಿ ಬಳಿಸಿ ಮನೆಯಲ್ಲಿ ಅಮ್ಮ ತಿಂಡಿ ಸಿದ್ಧಪಡಿಸುತ್ತಾಳೆ. ಹೋಟೆಲ್ ನವನ ಗುರಿ ಗ್ರಾಹಕರು ಮತ್ತು ಆ ಮೂಲಕ ಬರುವ ಹಣ ಆಗಿರುತ್ತದೆ. ಆದರೆ, ತಾಯಿಯ ಉದ್ದೇಶವೇ ಬೇರೆಯಾಗಿರುತ್ತದೆ. ಮಗನ ಅಭ್ಯುದಯ, ಉತ್ತಮ ಆರೋಗ್ಯದ ಹಾರೈಕೆ ತಾಯಿ ತಯ್ಯಾರಿಸುವ ತಿಂಡಿ ಹಿಂದಿರುತ್ತದೆ. ಹೀಗಾಗಿ ತಾಯಿ ಸಿದ್ಧಪಡಿಸಿದ ತಿಂಡಿಯ ರುಚಿ, ಸ್ವಾದ, ಹೋಟೆಲ್ನಲ್ಲಿ ಸಿಗಲಾರದು ಎಂದು ಉದಾಹರಣೆಗಳ ಸಹಿತ ಭಕ್ತರ ಮನಮುಟ್ಟುವಂತೆ ತಿಳಿಸಿಕೊಡುತ್ತಿದ್ದರು.
ಶ್ರೀಕೃಷ್ಣ ಫಲದ ಆಪೇಕ್ಷೆ ಇಲ್ಲದೆ ನಿಮ್ಮ ನಿಮ್ಮ ಕರ್ಮ ಮಾಡಿ ಎಂದು ಹೇಳಿದ. ಆದರೆ, ಫಲದ ಆಪೇಕ್ಷೆಯಿಲ್ಲದೆ ಯಾವುದೇ ಕೆಲಸ ಮಾಡದ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಪೂಜ್ಯರು ಆಗಾಗ ತಮ್ಮ ಪ್ರವಚನದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದರು.
ಭಗವದ್ಗೀತಾ, ಉಪನಿಷತ್ತು, ಬ್ರಹ್ಮಸೂತ್ರ, ರಾಮದಾಸರ ದಾಸ ಬೋಧ, ಭಾಗವತ ಮಹಾ ಪುರಾಣ, ಸಂತ ಏಕನಾಥರ ಭಾಗವತ, ಜ್ಞಾನೇಶ್ವರಿ, ಅಮೃತಾನುಭವ, ಪರಮಾಮೃತ, ಮುಕುಂದ ಮಹಾರಾಜರ ವಿವೇಕಸಿಂಧು, ಹಂಸರಾಜ ಸ್ವಾಮಿಗಳ ವೇದೇಶ್ವರಿ ಮುಂತಾದ ಶ್ರೇಷ್ಠ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿದವರು ಪೂಜ್ಯ ಶ್ರೀಪತಾನಂದ ಮಹಾರಾಜರು.
ಪರಮಪೂಜ್ಯರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಗುರುವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಪುಷ್ಪವೃಷ್ಟಿಯ ಮೂಲಕ ಅಂತಿಮ ನಮನ ಸಲ್ಲಿಸಿದ ಸಾವಿರಾರು ಭಕ್ತರು ಕಂಬಿನಿ ಮಿಡಿದರು. ಕಷ್ಟ ಎದುರಾದಾಗ ಧೈರ್ಯ ತುಂಬುತ್ತಿದ್ದ, ಸಮಸ್ಯೆಗಳು ಎದುರಾದಾಗ ಪರಿಹಾರದ ದಾರಿ ತೋರಿಸುತ್ತಿದ್ದ ಗುರುಗಳನ್ನು ಸ್ಮರಿಸಿ ಕಣ್ಣೀರು ಹಾಕಿದರು. ಪೂಜ್ಯರಾದ ಮಾಳಸಾಕಾಂತ ಮಹಾರಾಜರು, ಶ್ರೀಕಾಂತ ಮಹಾರಾಜರು, ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
ಸದ್ಗುರುಗಳ ಸಂಸ್ಥಾನದಲ್ಲಿ ಮೇಲ್ನೋಟಕ್ಕೆ ಮೌನ ತುಂಬಿಕೊಂಡಂತೆ ಕಂಡು ಬಂದಿರಬಹುದು. ಆದರೆ ಪೂಜ್ಯರ ಪವಿತ್ರ ವಾಣಿ, ಗೀತಾ ಪ್ರವಚನ ಮತ್ತು ಅವರು ಕಲಿಸಿಕೊಟ್ಟ ಜೀವನ ಮೌಲ್ಯಗಳು, ಉಪದೇಶಗಳು ಭಕ್ತರ ಹೃದಯಗಳಲ್ಲಿ ಸದಾಕಾಲ ಪ್ರತಿಧ್ವನಿಸುತ್ತಲೇ ಇರುತ್ತವೆ.


