Ad imageAd image

ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ : ಖಂಡ್ರೆ

Kannada Bimba Team
2 Min Read

 

ಕನ್ನಡ ಬಿಂಬ, ಬೀದರ್

ಒಣಭೂಮಿಯಲ್ಲಿರುವ ಮೊದಲ ವನ್ಯಜೀವಿ ಅಭಯಾರಣ್ಯ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಅತೀ ಹೆಚ್ಚು ಹೂವಿನ ವೈವಿಧ್ಯತೆ ಇರುವ ಪ್ರದೇಶ ಎಂಬ ಹೆಗ್ಗಳಿಕೆ ಇರುವ ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ಸಾಧ್ಯತೆಗಳ ಕುರಿತು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಅರಣ್ಯ ಸಚಿವರೂ ಆಗಿರುವ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಚಿಂಚೋಳಿ ಅಭಯಾರಣ್ಯ ಹಾಗೂ ಚಂದ್ರಪಳ್ಳಿ ಜಲಾಶಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದು,  ಪರಿಸರ ಪ್ರವಾಸೋದ್ಯಮ ಅಭಿವೃದ್ದಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಲಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಚಿಂಚೋಳಿ ವನ್ಯಜೀವಿ ಧಾಮ ಮತ್ತು ಚಂದ್ರಂಪಳ್ಳಿ ಡ್ಯಾಂ ಸುತ್ತಮುತ್ತಲಿನ ಪ್ರದೇಶಗಳನ್ನು ಚಾರಣಾಸಕ್ತರು ಹಾಗೂ ಪರಿಸರ ಪ್ರೇಮಿಗಳನ್ನು ಅಕರ್ಷಿಸುವ ರೀತಿಯಲ್ಲಿ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಬಹುದಾಗಿದೆ.  ಈ ಭಾಗದ ಪ್ರವಾಸಿಗರು ಪ್ರಕೃತಿಯ ಮನಮೋಹಕ ಸೌಂದರ್ಯವನ್ನು ಸುಲಭವಾಗಿ ಆನಂದಿಸುವಂತಾಗಬೇಕು ಎಂದು ಸಚಿವರು ಹೇಳಿದ್ದಾರೆ.

ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆ ಹಾಗೂ ನೈಸರ್ಗಿಕ ಪರಿಸರದ ಸ್ಥಿತಿಗತಿಗಳ ಕುರಿತು ಸಚಿವರು ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಪ್ರದೇಶಗಳ ಅರಣ್ಯ ಸಂಪತ್ತು, ವನ್ಯಜೀವಿ ಸಂರಕ್ಷಣೆ ಹಾಗೂ ನೈಸರ್ಗಿಕ ಪರಿಸರದ ಮಹತ್ವವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಚಿಂಚೋಳಿ ವನ್ಯಜೀವಿ ಅಭಯಾರಣ್ಯವನ್ನು 2011 ರಲ್ಲಿ ಅಭಯಾರಣ್ಯವೆಂದು ಘೋಷಿಸಲಾಯಿತು. ಇದು 134.88 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಈ ಅರಣ್ಯವು ಶ್ರೀಮಂತ ಜೀವವೈವಿಧ್ಯತೆಯನ್ನು ಹೊಂದಿದೆ. ಔಷಧೀಯ ಗಿಡಮೂಲಿಕೆಗಳು ಮತ್ತು ಮರಗಳ ಜೊತೆಗೆ ಶ್ರೀಗಂಧದಂತಹ ಪ್ರಭೇದಗಳು ಹೇರಳವಾಗಿ ಕಂಡುಬರುತ್ತವೆ.

ಚಂದ್ರಂಪಳ್ಳಿ ಜಲಾಶಯದ ಜೊತೆಗೆ  ನಾಲ್ಕು ಸಣ್ಣ ಅಣೆಕಟ್ಟುಗಳು ಈ ಅಭಯಾರಣ್ಯದಲ್ಲಿವೆ. ಜಿಂಕೆ, ನರಿ, ಹೈನಾ, ತೋಳ ಮುಂತಾದ ಪ್ರಾಣಿಗಳು ಇಲ್ಲಿವೆ. 35 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳೂ ಇವೆ.

ತೋಳ ಮತ್ತು ಕತ್ತೆಕಿರುಬಗಳಿಗೆ ಈ ಅಭಯಾರಣ್ಯವು ಸುರಕ್ಷಿತ ತಾಣವಾಗಿದೆ. ಈ ಅಭಯಾರಣ್ಯವು ಐದು ವಿಭಾಗಗಳಲ್ಲಿ ಹರಡಿದೆ. ಚಿಂಚೋಳಿ ಅರಣ್ಯ, ಸಂಗಪುರ ಅರಣ್ಯ, ಭೋನ್ಸಾಪುರ ಅರಣ್ಯ, ಮಗ್ದುಂಪುರ್ ಅರಣ್ಯ ಮತ್ತು ಶಾದಿಪುರ ಅರಣ್ಯ ಎಂದು ಈ ಐದು ಪ್ರದೇಶಗಳನ್ನು ಹೆಸರಿಸಲಾಗಿದೆ. ಈ ಪ್ರದೇಶದಲ್ಲಿ ಲಂಬಾಣಿ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

 

Share This Article

You cannot copy content of this page