
ಕನ್ನಡ ಬಿಂಬ, ಬೀದರ್
ಕಮಲನಗರ-ಬೀದರ ರಾಷ್ಟ್ರೀಯ ಹೆದ್ದಾರಿ (ಎನ್ ಎಚ್- 50) ಕಾಮಗಾರಿ ಅವೈಜ್ಞಾನಿಕವಾಗಿದ್ದು, ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಔರಾದ್ ಶಾಸಕ ಪ್ರಭು ಚಹ್ವಾಣ್, ಟೋಲ್ ಸಂಗ್ರಹ ಸಿದ್ದತೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
257 ಕೋಟಿ ವೆಚ್ಚದ ಈ ಹೆದ್ದಾರಿ ಕಾಮಗಾರಿಯನ್ನು ಗುಜರಾತಿನ ಸಂಸ್ಥೆಯೊಂದು ಕೈಗೊಂಡಿದ್ದು, ಕಾಮಗಾರಿಯ ಬಗ್ಗೆ ಸಾಕಷ್ಟು ದೂರುಗಳಿವೆ. ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ಮತ್ತು ದೊಡ್ಡ-ದೊಡ್ಡ ಬಿರುಕುಗಳಿವೆ. ದುರಸ್ತಿ ಕೆಲಸ ನಿರಂತರವಾಗಿ ನಡೆಯುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಕಡೆ ಬಿರುಕು ಬಿಡುತ್ತಿದೆ. ರಸ್ತೆ ಅವೈಜ್ಞಾನಿಕವಾಗಿದ್ದು, ಪ್ರತಿದಿನ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ ಎಂದು ಶಾಸಕರು ದೂರಿದ್ದಾರೆ.
ರಸ್ತೆಗೆ ಕಳಪೆ ಗುಣಮಟ್ಟದ ಸಿಮೆಂಟ್, ಕಬ್ಬಿಣ, ಕಾಂಕ್ರಿಟ್ ಮತ್ತಿತರೆ ಸಾಮಗ್ರಿಗಳನ್ನು ಬಳಕೆ ಮಾಡಲಾಗಿದೆ. ಕ್ಯೂರಿಂಗ್ ಸರಿಯಾಗಿ ಮಾಡಿಲ್ಲ. ಹಾಗಾಗಿ ರಸ್ತೆ ಕಿತ್ತು ಹೋಗುತ್ತಿದೆ. ಡಿವೈಡರ್‍ಗಳು, ಪಾದಚಾರಿ ಮಾರ್ಗ, ವಿದ್ಯುತ್ ದೀಪಗಳು, ಸಂಚಾರಿ ಚಿಹ್ನೆಗಳನ್ನು ಅಳವಡಿಸಲಾಗಿಲ್ಲ. ರಸ್ತೆಯನ್ನು ಸಮತಟ್ಟಾಗಿಯೂ ಮಾಡಿಲ್ಲ. ಹಿರಿಯ ನಾಗರಿಕರು, ರೋಗಿಗಳು ಆಸ್ಪತ್ರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹೆದ್ದಾರಿಯಲ್ಲಿ ಓಡಾಡುವುದಕ್ಕೂ ಭಯಪಡುವಂತಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಹಣ ಲೂಟಿ ಮಾಡಿದ್ದಾರೆ. ಈ ಕಾಮಗಾರಿ ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮವಾಗಬೇಕು. ರಸ್ತೆಯನ್ನು ಪುನಃ ನಿರ್ಮಿಸಬೇಕು ಎಂದು ಜನತೆ ಒತ್ತಾಯಿಸುತ್ತಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಈ ಹೆದ್ದಾರಿ ಕಾಮಗಾರಿಯ ಬಗ್ಗೆ ಕೇಂದ್ರ ಸರ್ಕಾರ, ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ಸಂಬಂಧಪಟ್ಟ ಎಲ್ಲರ ಗಮನಕ್ಕೆ ತಂದಿದ್ದೇನೆ. ವಿಧಾನಸಭಾ ಅಧಿವೇಶನದಲ್ಲಿಯೂ ಧ್ವನಿ ಎತ್ತಿದ್ದೇನೆ. ಅಲ್ಲಿ ಮಾತು ಕೊಟ್ಟಂತೆ ಲೋಕೋಪಯೋಗಿ ಸಚಿವರು ರಸ್ತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ರಸ್ತೆ ಕಳಪೆಯಾಗಿರುವುದು ನಿಜವೆಂದು ಖುದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಇಲ್ಲಿವರೆಗೆ ಯಾವುದೇ ಕ್ರಮವಾಗಿಲ್ಲ ಎಂದು ಶಾಸಕರು ಟೀಕಿಸಿದ್ದಾರೆ.
ಹೆದ್ದಾರಿ ಸರಿಯಾಗಿ ಇದ್ದರೆ ಮಾತ್ರ ಟೋಲ್ ಸಂಗ್ರಹಿಸಬೇಕೆಂಬ ನಿಯಮ ಇದೆ. ಆದರೆ ಇಲ್ಲಿ ರಸ್ತೆ ಇನ್ನೂ ಅಪೂರ್ಣ ಹಂತದಲ್ಲೇ ಇದೆ. ದುರಸ್ತಿ ಕೆಲಸಗಳು ಕಾಮಗಾರಿ ಆರಂಭದಿಂದ ಇಲ್ಲಿವರೆಗೆ ನಿರಂತರವಾಗಿ ನಡೆಯುತ್ತಿದೆ. ಆಗಿರುವ ಕೆಲಸವೂ ಅವೈಜ್ಞಾನಿಕ ಮತ್ತು ಅಪೂರ್ಣವಾಗಿದೆ. ದುರಸ್ತಿಯಿಂದ ರಸ್ತೆ ಸರಿಪಡಿಸುವುದು ಅಸಾಧ್ಯ. ಸಾರ್ವಜನಿಕರ ಬಳಕೆಗೆ ಯೋಗ್ಯವಾಗಿಲ್ಲ. ಹಾಗಾಗಿ ಈ ರಸ್ತೆಯನ್ನು ಮರು ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಅಲ್ಲಿವರೆಗೆ ಟೋಲ್ ಸಂಗ್ರಹ ಮಾಡಬಾರದು. ಟೋಲ್ ಕೆಲಸ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಜನಾಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಶಾಸಕರು ಎಚ್ಚರಿಸಿದ್ದಾರೆ.


