Ad imageAd image

ಮೊಬೈಲ್ ಬಳಕೆ, ಮಹಿಳಾ ಸುರಕ್ಷತೆ: ಶಾಹೀನ್ ಸಂಸ್ಥೆಯಿಂದ ಸಮೀಕ್ಷೆ

Kannada Bimba Team
3 Min Read

 

 

ಕನ್ನಡ ಬಿಂಬ, ಬೀದರ್

ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮನಸ್ಸಿನ ಮೇಲಾಗುತ್ತಿರುವ ಪರಿಣಾಮಗಳ ಕುರಿತು ಬೀದರ್ ನಗರದ ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶೇಷ ಸರ್ವೆ ಆರಂಭಿಸಿದೆ. ಜನವರಿ 14 ರಂದು ಕಾಲೇಜಿನ ಮುಖ್ಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಅವರು ಈ ಸಮೀಕ್ಷೆಗೆ ಚಾಲನೆ ನೀಡಿದರು.

ಮನೆ ಮನೆ ಭೇಟಿ ಮತ್ತು ಆನ್‍ಲೈನ್ ಮೂಲಕ ನಡೆಸಲಾಗುವ ಈ ಸಮೀಕ್ಷೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಇರುವ ಕಾನೂನು, ಸರಕಾರದ ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಸ್ವಚ್ಛ ಬೀದರ್ ನಿರ್ಮಾಣಕ್ಕಾಗಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆಯಲಿದೆ.

ಮೂರು ಮುಖ್ಯ ಸಂಗತಿಗಳ ಬಗಿಗೆನ ಈ ಸರ್ವೆಯು 15 ದಿನಗಳ ಕಾಲ ನಡೆಯಲಿದ್ದು, ಶಾಹೀನ್ ಕಾಲೇಜಿನಲ್ಲಿ ಬಿಎ, ಬಿಎಸ್‍ಸಿ, ಬಿಕಾಂ ಮತ್ತು ಬಿಸಿಎ ಓದುತ್ತಿರುವ 200 ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಆನ್‍ಲೈನ್ ಸರ್ವೆಗಾಗಿ ಶಾಹೀನ್ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ಲಿಂಕ್ ಕೊಡಲಾಗಿದೆ. ಇದನ್ನು ಕ್ಲಿಕ್ ಮಾಡುವ ಮೂಲಕ ಸರ್ವೆಯಲ್ಲಿ ಪಾಲ್ಗೊಳ್ಳಬಹುದು. ಇದು ಶೈಕ್ಷಣಿಕ ಉದ್ದೇಶಕ್ಕಾಗಿ ನಡೆಯುವ ಸರ್ವೆ ಆಗಿದ್ದು, ಯಾವುದೇ ವೈಯುಕ್ತಿಕ ಮಾಹಿತಿಯನ್ನು ಎಲ್ಲೂ ಹಂಚಿಕೊಳ್ಳುವುದಿಲ್ಲ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅದ್ಯಕ್ಷ ಡಾ. ಅಬ್ದುಲ್ ಖದೀರ್ ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚೆನಶೆಟ್ಟಿ ಮಾತನಾಡಿ, ಶಾಹೀನ್ ಸಂಸ್ಥೆಯ ಸಾಮಾಜಿಕ, ಮಾನವೀಯ ಕಾಳಜಿಯ ಕಾರ್ಯಗಳನ್ನು ಕೊಂಡಾಡಿದರು. ಶಾಹೀನ್ ಸಂಸ್ಥೆಯು ಶಿಕ್ಷಣದ ಜೊತೆಗೆ ಸಮಾಜಕ್ಕೆ ಉಪಯುಕ್ತವಾದ ಕೆಲಸಗಳನ್ನು ಮಾಡುತ್ತಿದೆ. ಬೀದರ್ ಅನ್ನು ದುಶ್ಚಟಗಳಿಂದ, ಭಿಕ್ಷಾಟನೆಯಿಂದ ಮುಕ್ತಗೊಳಿಸಲು ಶ್ರಮಿಸುತ್ತಿದೆ. ಸರಳ ವಿವಾಹ ಕುರಿತು ಜಾಗೃತಿ ಮೂಡಿಸುತ್ತಿದೆ. ಇದೀಗ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದೆ. ಇದೊಂದು ಮಹತ್ವದ ಮತ್ತು ಮಾದರಿಯಾದ ಕಾರ್ಯವಾಗಿದೆ ಎಂದು ಸುರೇಶ ಚೆನಶೆಟ್ಟಿ ಹೇಳಿದರು.

ಮಕ್ಕಳನ್ನು ಮೊಬೈಲ್ ಮೋಹದಿಂದ ಬಿಡುಗಡೆ ಮಾಡಲೇಬೇಕಾಗಿದೆ. ಇದಕ್ಕಾಗಿ ಸಾಮೂಹಿಕ ಪ್ರಯತ್ನ ನಡೆಯಬೇಕು. ಪಾಲಕರೂ ಇದರಲ್ಲಿ ಭಾಗಿಯಾಗಬೇಕು ಎಂದರು.  ಮಹಿಳೆಯರ ಸುರಕ್ಷತೆ ಮತ್ತು ಸ್ವಚ್ಛತೆ ಕುರಿತೂ ಸರ್ವೆ ನಡೆಸುತ್ತಿರುವುದು ಅನುಕರಣೀಯ ಎಂದು ಹೇಳಿದರು.

ಬೀದರ್  ನಾಗರಿಕ ಸನ್ಮಾರ್ಗ ಸಮಿತಿಯ ಪ್ರಮುಖರಾದ ಡಾ. ರಾಜಶೇಖರ ಸೇಡಮಕರ್ ಮಾತನಾಡಿ, ಮೊಬೈಲ್ ವೀಕ್ಷಣೆಯಿಂದ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ತಿಳಿಸಿದರು. ಸಮಿತಿಯು ಸರಳ ವಿವಾಹ ಕುರಿತು ಜಾಗೃತಿ ಮೂಡಿಸುತ್ತಿದೆ. ವ್ಯಸನ ಮುಕ್ತ ಬೀದರ್ ನಿರ್ಮಾಣಕ್ಕೆ ಸಂಕಲ್ಪತೊಟ್ಟಿದೆ. ಅತಿಯಾದ ಮೊಬೈಲ್ ವೀಕ್ಷಣೆಯಿಂದ ದೇಹದಲ್ಲಿ ಕೊಬ್ಬು ಸಂಗ್ರಹ ಹೆಚ್ಚಿ, ಆರೋಗ್ಯ ಸಮಸ್ಯೆ ಎದುರಾಗುತ್ತಿವೆ ಎಂದು ಹೇಳಿದರು.

ಶಾಹೀನ್ ಕಾಲೇಜಿನ ಪ್ರಾಚಾರ್ಯರಾದ ಅಫ್ರಾ ನಾಜ್ ಅವರು ಮಾತನಾಡಿ, ಸರ್ವೆಯ ಉದ್ದೇಶಗಳನ್ನು ತಿಳಿಸಿದರು. ಮೊಬೈಲ್ ವೀಕ್ಷಣೆಯಿಂದ ಮಕ್ಕಳಲ್ಲಿ  ಏಕಾಗ್ರತೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ರೀಲ್ ವೀಕ್ಷಣೆಯು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆಯಲ್ಲಿ ಮಕ್ಕಳು ಏಕಾಗ್ರತೆಯಿಂದ ಪಾಠ ಕೇಳುವುದು ಕಡಿಮೆಯಾಗುತ್ತಿದೆ. ಸಮಾಜದೊಂದಿಗೆ ಬೆರೆಯುವುದು ಕಡಿಮೆಯಾಗುತ್ತಿದೆ. ಅಕ್ಕಪಕ್ಕ ಇದ್ದರೂ ಮಾತಾಡದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ, ವರದಕ್ಷಿಣೆ ಕಾಟದಿಂದ ರಕ್ಷಿಸಲು ಹಲವು ಕಾಯ್ದೆಗಳಿವೆ. ಸರಕಾರದ ಸಂಸ್ಥೆಗಳು ಇವೆ. ಬೀದರಿನಲ್ಲಿ ಅಕ್ಕಪಡೆ ಈ ದಿಸೆಯಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಇವೆಲ್ಲ ಸಂಗತಿಗಳ ಬಗ್ಗೆ ಸರ್ವೆ ಸಮಯದಲ್ಲಿ ಮಾಹಿತಿ ಕೊಡಲಾಗುತ್ತದೆ. ಸುರಕ್ಷತೆಗಾಗಿ ಇರುವ ವ್ಯವಸ್ಥೆ, ನಿಯಮಗಳು ಮತ್ತು ಯಾರನ್ನು ಸಂಪರ್ಕಿಸಬಹುದು ಎಂಬ ಬಗ್ಗೆಯೂ ತಿಳಿಸಿಕೊಡಲಾಗುತ್ತದೆ ಎಂದು ಪ್ರೊ. ಅಫ್ರಾ ನಾಜ್ ಮಾಹಿತಿ ನೀಡಿದರು.

ಸಮಿತಿಯ ಪ್ರಮುಖರಾದ ಅಶೋಕ ವಡಗಾವೆ, ಬಸವರಾಜ ಮಾಳಗೆ, ಶಂಭುಲಿಂಗ ವಾಲದೊಡ್ಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

Share This Article

You cannot copy content of this page