Ad imageAd image

ಮೊದಲ ಸ್ಥಾನದಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನ !

Kannada Bimba Team
3 Min Read

 

 

ಕನ್ನಡ ಬಿಂಬ, ಬೀದರ್

ಭಾಲ್ಕಿ ತಾಲೂಕಿನ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಪುಣ್ಯಕ್ಷೇತ್ರ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಈ ಪುಣ್ಯಕ್ಷೇತ್ರವು ಅತ್ಯಧಿಕ ಆದಾಯವನ್ನೂ ಹೊಂದಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ಎ ವರ್ಗಕ್ಕೆ ಸೇರಿರುವ ಈ ದೇವಸ್ಥಾನವು ಬೀದರ್ ಜಿಲ್ಲೆಯ ಮಟ್ಟಿಗೆ ಆದಾಯದಲ್ಲಿ ಮೊದಲ ಸ್ಥಾನದಲ್ಲಿದೆ.

ಬೀದರ್ ನಗರದ ಪುರಾತನ ಝರಣಿ ನರಸಿಂಹ ದೇವಸ್ಥಾನ, ಹುಮನಾಬಾದ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಗಳು ನಂತರದ ಸ್ಥಾನದಲ್ಲಿವೆ.

2022 ರಿಂದ 2024 ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಮೈಲಾರ ಮಲ್ಲಣ್ಣ ದೇವಸ್ಥಾನದ ಆದಾಯ 7.21 ಕೋಟಿ ರೂ. ಆಗಿತ್ತು. ಇದೇ ಅವಧಿಯಲ್ಲಿ ಚಿಟಗುಪ್ಪ ತಾಲೂಕಿನ  ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನವು 5.74 ಕೋಟಿ, ಬೀದರ್ ನಗರದ ಝರಣಿ ನರಸಿಂಹ ಕ್ಷೇತ್ರವು 4.96 ಕೋಟಿ ಮತ್ತು ಹುಮನಾಬಾದ ಪಟ್ಟಣದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನದ ಒಟ್ಟು ಆದಾಯ 4.84 ಕೋಟಿ ರೂ. ಆಗಿತ್ತು ಎಂಬ ಮಾಹಿತಿ ಶಾಸಕ ಅಭಯಕುಮಾರ ಪಾಟೀಲರ ಪ್ರಶ್ನೆಗೆ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ನೀಡಿರುವ ಲಿಖಿತ ಉತ್ತರದಲ್ಲಿದೆ.

ಮೈಲಾರ ಮಲ್ಲಣ್ಣ ದೇವಸ್ಥಾನವು 2022 ರಲ್ಲಿ 1.95 ಕೋಟಿ, 2023 ರಲ್ಲಿ 2.75 ಕೋಟಿ ಮತ್ತು 2024 ರಲ್ಲಿ 2.68 ಕೋಟಿ ರೂ.ಆದಾಯ ಪಡೆದಿತ್ತು. ಈ ದೇವಸ್ಥಾನದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 2022 ರಲ್ಲಿ 1.90 ಕೋಟಿ, 2023 ರಲ್ಲಿ 2.44 ಕೋಟಿ ಮತ್ತು 2024 ರಲ್ಲೂ 2.44 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು.

ಬೀದರ ನಗರದ ನರಸಿಂಹ ಝರಣಿ ದೇವಸ್ಥಾನದ ಆದಾಯ 2022 ರಲ್ಲಿ 1.48 ಕೋಟಿ, 2023 ರಲ್ಲಿ 1.75 ಕೋಟಿ, 2024 ರಲ್ಲಿ 1.72 ಕೋಟಿ ರೂ. ಗಳಾಗಿತ್ತು. ಈ ಕ್ಷೇತ್ರದ ಅಭಿವೃದ್ದಿಗಾಗಿ 2022 ರಲ್ಲಿ 94.86 ಲಕ್ಷ, 2023 ರಲ್ಲಿ 3.97 ಕೋಟಿ, 2024 ರಲ್ಲಿ 1.64 ಕೋಟಿ ರೂ. ವೆಚ್ಚ ಮಾಡಲಾಗಿತ್ತು.

ಚಿಟಗುಪ್ಪ ತಾಲೂಕಿನ ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದ ಆದಾಯವು 2022 ರಲ್ಲಿ 2.08 ಕೋಟಿ, 2023 ರಲ್ಲಿ 1.48 ಕೋಟಿ ಮತ್ತು 2024 ರಲ್ಲಿ 2.17 ಕೋಟಿ ಆಗಿತ್ತು. ಈ ದೇವಸ್ಥಾನದ ಅಭಿವೃದ್ದಿಗಾಗಿ 2022 ರಲ್ಲಿ 3.40 ಕೋಟಿ,  2023 ರಲ್ಲಿ 1.19 ಕೋಟಿ ಮತ್ತು 2024 ರಲ್ಲಿ 2.35 ಕೋಟಿ ರೂ. ಖರ್ಚು ಮಾಡಿರುವ ಮಾಹಿತಿ ಇದೆ.

ಹುಮನಾಬಾದ್ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆದಾಯವು 2022 ರಲ್ಲಿ  1.28 ಕೋಟಿ, 2023 ರಲ್ಲಿ 1.70 ಕೋಟಿ, 2024 ರಲ್ಲಿ 1.90 ಕೋಟಿ ರೂ. ಆಗಿತ್ತು. ದೇವಸ್ಥಾನದ ಅಭಿವೃದ್ದಿ ಕಾಮಗಾರಿಗಳಿಗೆ  2022 ರಲ್ಲಿ  99.17 ಲಕ್ಷ, 2023 ರಲ್ಲಿ 78.33 ಲಕ್ಷ ಮತ್ತು 2024 ರಲ್ಲಿ  1.51 ಕೋಟಿ ರೂ. ಖರ್ಚು ಮಾಡಲಾಗಿತ್ತು.

ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿರುವ ಸೀಮಿ ನಾಗನಾಥ ದೇವಸ್ಥಾನ, ಚಳಕಾಪುರದ ಹನುಮಾನ ದೇವಸ್ಥಾನ ಮತ್ತು ಬೀದರ್ ಬಳಿಯ ಹೊನ್ನಿಕೇರಿ ಸಿದ್ದೇಶ್ವರ ದೇವಸ್ಥಾನಗಳೂ ಧಾರ್ಮಿಕ ದತ್ತಿ ಇಲಾಖೆಯ ಎ ಪ್ರವರ್ಗದಲ್ಲಿವೆ.

ಇಲಾಖೆ ಬಿ ಪ್ರವರ್ಗದಲ್ಲಿ ಜಿಲ್ಲೆಯ ಮೂರು ದೇವಸ್ಥಾನಗಳನ್ನು ಗುರುತಿಸಿದೆ. ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನ, ಚಿಟಗುಪ್ಪ ತಾಲುಕಿನ ಕರಕನಳ್ಳಿಯ ಬಕ್ಕಪ್ರಭು ದೇವಸ್ಥಾನ ಮತ್ತು ಬಸವಕಲ್ಯಾಣ ತಾಲೂಕಿನ ಚಂಡಕಾಪುರದ ರಾಮಲಿಂಗೇಶ್ವರ ದೇವಸ್ಥಾನಗಳು ಈ ವರ್ಗದಲ್ಲಿವೆ. ಬಿ ಪ್ರವರ್ಗದಲ್ಲಿರುವ ದೇವಸ್ಥಾನಗಳ ವಾರ್ಷಿಕ ಆದಾಯ 50 ಲಕ್ಷಕ್ಕಿಂತ ಕಡಿಮೆ ಇದೆ. ಅಮರೇಶ್ವರ ದೇವಸ್ಥಾನದ ಆದಾಯ 2024 ರಲ್ಲಿ 34.91 ಲಕ್ಷ, ಕರಕನಳ್ಳಿ ಬಕ್ಕಪ್ರಭು ದೇವಸ್ಥಾನದ ಆದಾಯ 22.51 ಲಕ್ಷ ಮತ್ತು ಚಂಡಕಾಪುರದ ರಾಮಲಿಂಗೇಶ್ವರ ದೇವಸ್ಥಾನದ ಆದಾಯ 10.44 ಲಕ್ಷ ರೂ. ಗಳಾಗಿತ್ತು ಎಂಬ ಮಾಹಿತಿ ಸಚಿವರ ಉತ್ತರದಲ್ಲಿದೆ.

Share This Article

You cannot copy content of this page