
ಮಾರುತಿ ಸೋನಾರ್ ಬೀದರ್
ಭಾನುವಾರದ ಬೆಳಕು ಹರಿಯುತ್ತಲೇ ರೋಹಿತ್ ಜೊತೆ ಅಷ್ಟೂರು ಕಡೆ ಹೊರಟೆ. ಬೀದರ್ ವಶಪಡಿಸಿಕೊಂಡಿದ್ದರ ಗೆಲುವಿನ ಸಂಕೇತವಾಗಿ ಔರಂಗಜೇಬ್ ನಿರ್ಮಿಸಿದ ಫತ್ತೆ ದರವಾಜಾ, ಬಹಮನಿ ಕಾಲದ ಕಾವಲು ಗೋಪುರ ಚೌಬಾರಾ, ದೇಶದ ಪ್ರಸಿದ್ಧಿ ಹೆಚ್ಚಿಸಿದ ಮಹಮೂದ್ ಗವಾನ್ ನಿರ್ಮಿಸಿದ ಗವಾನ್ ಮದರಸಾ, ಜಿಲ್ಲಾ ಪಂಚಾಯಿತಿ ಕಚೇರಿಗಳಿರುವ ರಸ್ತೆಯ ಬದಲು ಈ ಬಾರಿ ಜಹೀರಾಬಾದ್ ರಸ್ತೆ ಮೂಲಕ ನಮ್ಮ ಪ್ರಯಾಣ ಶುರುವಾಯಿತು.
ಗುಂಪಾ ರಿಂಗ್ ರೋಡ್ ಮೂಲಕ ಶಹಾಪುರ್ ಗೇಟ್ ತಲುಪಿ, ಅಲ್ಲಿಂದ ದೇವದೇವವನ ತಲುಪಿದೇವು. ಅಲ್ಲಿಂದ ಅಷ್ಟೂರು ವೀಕ್ಷಣಾ ಪ್ರವಾಸ ಶುರುವಾಯಿತು. ಆಗಷ್ಟೇ ನಿರ್ಮಾಣಗೊಂಡಿದ್ದ ಔಟರ್ ರಿಂಗ್‍ರೋಡ್, ವಿಸ್ತಾರವಾದ ಹಸಿರಿನ ಮಧ್ಯೆ ಎಳೆದ ಕಪ್ಪು ಗೆರೆಯಂತೆ ಗೋಚರವಾಗುತಿತ್ತು. ಮೂಡಲು ಕೆಂಪಾಗಿತ್ತು. ಹಸಿರು ಹುಲ್ಲಿನ ಮೇಲೆಲ್ಲ ತುಂಬಿಕೊಂಡಿದ್ದ ಇಬ್ಬನಿಯ ಹನಿಗಳು ತಂಗಾಳಿಯಿಂದಾಗಿ ಜೀವ ಪಡೆದುಕೊಂಡಿದ್ದವು.
ರೋಹಿತ್, ತನ್ನ ಮೊಬೈಲ್ ಬಳಸಿ ಹಸಿರಿನ ಮಧ್ಯೆ ಕಂಗೊಳಿಸುತ್ತಿದ್ದ ಬಣ್ಣ ಬಣ್ಣದ ಸಣ್ಣ ಹೂವುಗಳ ಫೊಟೊ ಕ್ಲಿಕ್ಕಿಸಲಾರಂಭಿಸಿದ. ಅಷ್ಟಾಗಿ ಕಣ್ಣಿಗೆ ಬೀಳದ, ಬಿದ್ದರೂ ಸಣ್ಣ ಆಕಾರದಿಂದಾಗಿ ವೈವಿಧ್ಯಮಯ, ವರ್ಣಗಳ ವಿನ್ಯಾಸ ಕಣ್ಮನ ತುಂಬಿಕೊಳ್ಳದಿದ್ದರಿಂದ ನಾನು ಎಂದೂ ಆ ಹುಲ್ಲು ಹೂವುಗಳತ್ತ ಗಮನ ಹರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಹೂವುಗಳ ಅದ್ಭುತ ಸೌಂದರ್ಯದ ದರ್ಶನವಾಯಿತು.
ಅಲ್ಲಲ್ಲಿ ನಿಲ್ಲುತ್ತ, ಫೋಟೊ ಕ್ಲಿಕ್ಕಿಸುತ್ತ ನಮ್ಮ ಪ್ರಯಾಣ ಮುಂದೆ ಸಾಗಿತ್ತು. ಮುಂದೆ ಮಲ್ಕಾಪುರ ರಸ್ತೆಯು ಔಟರ್‍ರಿಂಗ್ ರೋಡ್ ಮಧ್ಯದಿಂದ ಹಾದು ಹೋಗಿದ್ದ ವೃತ್ತ ಎದುರಾಯಿತು. ವೃತ್ತದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಫಲಕ ಗಮನ ಸೆಳೆಯಿತು.
ಮಲ್ಕಾಪುರ ರಸ್ತೆಯು ರಿಂಗ್ ರೋಡ್ ಸಂಧಿಸುವ ಸ್ಥಳದಲ್ಲಿ ನಿಂತು ಪಶ್ಚಿಮದತ್ತ ದೃಷ್ಟಿ ಹಾಯಿಸಿದ್ದಲ್ಲಿ ಝರಣಿ ನರಸಿಂಹ ಕ್ಷೇತ್ರ ಕಾಣುತ್ತದೆ. ಆದರೆ, ನನ್ನನ್ನು ಹೆಚ್ಚು ಆಕರ್ಷಿಸಿದ್ದು ವೃತ್ತದ ಮೂಲೆಯೊಂದರಲ್ಲಿ ನಿಲ್ಲಿಸಿದ್ದ ನಾಮಫಲಕ !.
ಅಮನ್ ಚೌಕ್. ಫರ್ಹಾ ಬಾಗ್ !.
ಫರ್ಹಾಬಾಗ್. ಇದು ಝರಣಿ ನರಸಿಂಹ ಕ್ಷೇತ್ರಕ್ಕೆ ಇಡಲಾಗಿದ್ದ ಮತ್ತೊಂದು ಹೆಸರು. ಈ ಹೆಸರು ಇಟ್ಟಾತ ಔರಂಗಜೇಬ್ ಆಡಳಿತದಲ್ಲಿ ಬೀದರ್‍ನ ಸುಬೇದಾರನಾಗಿದ್ದ ಮುಖ್ತಾರ್ ಖಾನ್ ಅಲ್ ಹುಸೇನಿ ಅಸ್ಸಬ್ಜವಾರಿ.
ಹೂದೋಟ ಎಂಬ ಅರ್ಥ ಕೊಡುವ ಫರ್ಹಾಬಾಗ್ ಪದ ನೆನಪಿನಲ್ಲಿರುವುದು ಸಾದ್ಯವೇ ಇರಲಿಲ್ಲ. ನಾಮಫಲಕವು ಹೆಸರು ನೆನೆಪಿಸಿಕೊಳ್ಳುವಂತೆ ಮಾಡಿತ್ತು.
`ಔರಂಗ್‍ಜೇಬ್ ಆಳ್ವಿಕೆಯ 14 ನೇ ವರ್ಷದಲ್ಲಿ ಅಂದರೆ, 1671ರ ಜುಲೈ 2 ರಂದು, ಆಗ ಜಾಫರಬಾದ್ ಎಂದು ಕರೆಯಲ್ಪಡುತ್ತಿದ್ದ ಬೀದರ್‍ನ ಸುಬೇದಾರ್ ಆಗಿದ್ದ ಮುಖ್ತಾರ್ ಖಾನ್ ಅಲ್ ಹುಸೇನಿ ಅಸ್ಸಬ್ಜವಾರಿ ಎಂಬಾತ ಝರಣಿ ಕ್ಷೇತ್ರದಲ್ಲಿದ್ದ ದೇವಸ್ಥಾನವನ್ನು ಅಪವಿತ್ರಗೊಳಿಸಿ, ಆ ಸ್ಥಳದಲ್ಲಿ ಮಸೀದಿ ಹಾಗೂ ತೋಟ ನಿರ್ಮಿಸಿದ್ದ’ ಎಂಬ ಮಾಹಿತಿ ಶಾಸನದಲ್ಲಿದೆ. ಝರಣಿ ಕ್ಷೇತ್ರದಲ್ಲಿ ಈಗಲೂ ಮಸೀದಿ ಇದೆ. ಗಚ್ಚಿನಲ್ಲಿ ಕೆತ್ತಲಾಗಿರುವ ಶಾಸನ ಬರಹವೂ ಇದೆ.
ಅಮನ್ ಚೌಕ್‍ನ ಮೂಲೆಯಲ್ಲಿದ್ದ ನಾಮಫಲಕದ ಬಳಿ `ಇತಿಹಾಸ’ದಲ್ಲಿ ಮುಳುಗಿದ್ದ ನಾನು ಎಚ್ಚರಗೊಂಡು, ವರ್ತಮಾನಕ್ಕೆ ಮರಳಿದ್ದು ರೋಹಿತ್ ಹತ್ತಿರ ಬಂದಾಗಲೇ.
`ಪಪ್ಪಾಜಿ, ಏನಿದು’ ಎಂದು ಕೇಳಿದ. ಇಷ್ಟೊತ್ತು ನೆನಪು ಮಾಡಿಕೊಂಡ ಇತಿಹಾಸವನ್ನು ಚುಟುಕಾಗಿ ತಿಳಿಸಿದೆ.
`ಹೌದಾ, ಈ ಕ್ಷೇತ್ರ ಶತಮಾನಗಳಷ್ಟು ಪುರಾತನವಾದದ್ದಾ ?, ಎಂದು ಕೇಳಿದ. ಹೌದು ಎಂದು ತಲೆ ಅಲ್ಲಾಡಿಸಿದೆ.
ಒಂದು ಕ್ಷಣ ಸುಮ್ಮನಿದ್ದ ರೋಹಿತ್, ಅಷ್ಟೂರು ನೆನಪು ಮಾಡಿದ. ನಡೆ ಹೋಗೋಣ ಅಂದೆ. ಬೈಕು ಬಹಮನಿ ಅರಸರ ಸಮಾಧಿಗಳಿರುವ ಅಷ್ಟೂರು ಗ್ರಾಮದತ್ತ ಸಾಗಲಾರಂಭಿಸಿತು. ವರ್ತುಲ ರಸ್ತೆ ಕೊನೆಗೊಂಡು ಅಷ್ಟೂರು ರಸ್ತೆ ಶುರುವಾಯಿತು. ಎಡಭಾಗದಲ್ಲಿದ್ದ ಗುಡ್ಡದ ಮೇಲಿದ್ದ ಬೃಹದಾಕಾರದ, ಶಿಲೆಗಳನ್ನು ತೋರಿಸಿದ ರೋಹಿತ್, ಅವು ಏನು, ಚೌಕಾಕಾರದ ಆ ಕಲ್ಲುಗಳನ್ನು ಅಲ್ಲಿ ಯಾರು ಇಟ್ಟಿದ್ದಾರೆ ಎಂದು ಕೇಳಿದ. ನನಗೂ ಉತ್ತರ ತಿಳಿದಿರಲಿಲ್ಲ. ಮೌನವಾದೆ.
ಇನ್ನಷ್ಟು ದೂರ ಕ್ರಮಿಸುತ್ತಲೇ ಬೈಕ್ ವೇಗ ತಗ್ಗಿತ್ತು. ಇಲ್ಲೊಂದು ಬಾವಿ ಇದೆ ನೋಡುವಿಯಾ ಎಂದು ಕೇಳಿದೆ.
`ಬಾವಿಯಾ, ಏನಿದೆ ಅಲ್ಲಿ ನೋಡೋಕೆ’ ಎಂದು ಪ್ರಶ್ನಿಸಿದ.
ಅದು ಸಾಮಾನ್ಯ ಬಾವಿ ಅಲ್ಲ. ಅಷ್ಟಕೋನಾಕೃತಿಯ, ಅಷ್ಟ ಕಮಾನುಗಳ ರಚನೆ ಇರುವ ಅಪ್ಸರೆಯರ ಬಾವಿ ಎಂದು ಅದರ ಮಹತ್ವ, ವಿಶೇಷತೆ ತಿಳಿಸಲು ಯತ್ನಿಸಿದೆ.
ಅಲ್ಲಿ ಅಪ್ಸರೆಯರು ಸ್ನಾನ ಮಾಡುತ್ತಿದ್ದರಾ ಎಂದು ಮರು ಪ್ರಶ್ನಿಸಿದ.
`ಇರಲಿಕ್ಕಿಲ್ಲ. ಆದರೆ, ಅದೊಂದು ಸುಂದರ ಬಾವಿ ಅನ್ನೊದು ನಿಜ. ಅದಕ್ಕೇ `ಪರಿ ಬಾವಡಿ’ ಎಂಬ ಹೆಸರು’ ಇನ್ನುಷ್ಟು ಮಾಹಿತಿ ನೀಡಿದೆ.
ಅಷ್ಟೂರಿನ ಸೆಳೆತ ಹೆಚ್ಚಿತ್ತು. ಸ್ವಲ್ಪ ದೂರ ಹೋಗುತ್ತಲೇ ಮತ್ತೆ ಬೈಕ್ ವೇಗ ತಗ್ಗಿತು. ಎಡಭಾಗದಲ್ಲಿ ಅಷ್ಟಕೋನಾಕೃತಿಯ, ಬೀದರ್ ಮಟ್ಟಿಗೆ ತೀರಾ ಹೊಸದಾದ ಪುರಾತನ ಕಟ್ಟಡ ಕಣ್ಣಿಗೆ ಬಿದ್ದಿತು. ಅದು ಸೂಫಿ ಸಂತರ ಸಮಾಧಿ ಇರುವ ಚೌಖಂಡಿ. ಅದರ ರಚನೆ, ಭವ್ಯತೆ ಕಂಡು ರೋಹಿತ್ ಖುಷಿಯಾಗಿದ್ದ. ನೋಡಬೇಕಾ ಎಂದು ಕೇಳಿದೆ.
`ಈಗ ಬೇಡ, ಇದಕ್ಕೂ ದೊಡ್ಡ ಇತಿಹಾಸ ಇರಬೇಕಲ್ಲ, ಮುಂದಿನ ವಾರ ಬರೋಣ. ಆಗ ನಿಧಾನಕ್ಕೆ ನೋಡಿದರಾಯಿತು’ ಅಂದ. ನಾನೂ ಸುಮ್ಮನಾದೆ.
ಬೀದರ್ ನಗರಕ್ಕೆ ರಾಜಧಾನಿ ಪಟ್ಟ ನೀಡಿದ ಬಹಮನಿ ಅರಸರ ಸಮಾಧಿಗಳು ಅಷ್ಟೂರಿನಲ್ಲಿವೆ. ಬಹಮನಿಗಳನ್ನು ಮೂಲೆಗುಂಪು ಮಾಡಿ ಅಧಿಕಾರಕ್ಕೆ ಬಂದ ಬರೀದಶಾಹಿ ಅರಸರ ಗೋರಿಗಳು ಬಸ್ ನಿಲ್ದಾಣ ಬಳಿ ಇದೆ. ಎರಡೂ ಕಡೆ ಭವ್ಯ ಗುಂಬಜ್‍ಗಳನ್ನು ನಿರ್ಮಿಸಲಾಗಿದೆ.
ಅಷ್ಟೂರಿನ ಗುಂಬಜ್‍ಗಳನ್ನು ನೋಡದಿದ್ದಲ್ಲಿ ಬೀದರ್ ಪರವಾಸ ಪೂರ್ಣಗೊಳ್ಳುವುದೇ ಇಲ್ಲ ಎಂಬ ಮಾತಿದೆ. ಅಷ್ಟರಮಟ್ಟಿಗೆ ಅಷ್ಟೂರು ಪ್ರಸಿದ್ಧವಾಗಿದೆ. ನಗರದಿಂದ ಪೂರ್ವಕ್ಕೆ ನಾಲ್ಕು ಕಿ.ಮೀ. ಅಂತದಲ್ಲಿರುವ ಈ ಊರು ಬಹಮನಿ ಅರಸರ ಗುಂಬಜ್‍ಗಳಿಂದಾಗಿ ಪ್ರಸಿದ್ಧವಾಗಿದೆ.
ಕಲಬುರಗಿಯಿಂದ ಬೀದರ್‍ಗೆ ರಾಜಧಾನಿ ವರ್ಗಾಯಿಸಿ ಒಂದನೇ ಅಹಮದ್‍ನ ಗೋರಿ ಇರುವ ಗುಂಬಜ್ ಎಲ್ಲಕ್ಕೂ ಭವ್ಯವಾಗಿದೆ. ಆಕಾರ, ರಚನೆ ವಿನ್ಯಾಸ ಸೇರಿದಂತೆ ಎಲ್ಲದರಲ್ಲೂ ಭವ್ಯವಾಗಿದೆ. ಎರಡನೇ ಅರಸ ಅಲ್ಲಾವುದ್ದಿನ್ ಗುಂಬಜ್ ಮೋಹಕವಾಗಿದೆ. ಮೂರನೆಯದ್ದು `ಜಾಲೀಂ’ ಎಂದು ಕರೆಸಿಕೊಂಡಿದ್ದ ಹುಮಾಯುನ್‍ಶಹಾನದ್ದು. ಸಿಡಿಲಿನ ಹೊಡೆತದಿಂದ ಅರ್ಧಭಾಗ ಕುಸಿದಿದೆ. ಅರಸನ ದುಷ್ಕøತ್ಯಗಳಿಗೆ ಭಗವಂತ ಸಿಡಿಲಿನ ಮೂಲಕ ಶಿಕ್ಷೆ ನೀಡಿದ. ಆತನ ಸಮಾಧಿಯು ಬಿಸಿಲು, ಮಳೆಯಲ್ಲಿರುವಂತೆ ಮಾಡಿದ ಎಂಬ ಅಭಿಪ್ರಾಯ ಈ ಭಾಗದಲ್ಲಿದೆ.
ಬೃಹದಾಕಾರದ, ಅರ್ಧ ಕುಸಿದ ಹುಮಾಯುನ್‍ಶಹಾನ ಗುಂಬಜ್ ಅನ್ನು ರೋಹಿತ್, ರೆಪ್ಪೆ ಬಡಿಯದೇ ನೋಡುತ್ತಿದ್ದ. ಗುಂಬಜ್ ಕುರಿತು ತಿಳಿದುಕೊಳ್ಳುವ ಆಸಕ್ತಿ ಆತನಲ್ಲಿತ್ತು. ನಗುಮುಖದೊಂದಿಗೆ ನನ್ನತ್ತ ನೋಡಿದ. ನನ್ನೊಳಿಗಿನ ಇತಿಹಾಸದ ಪುಟಗಳು ತೆರೆದುಕೊಂಡವು.
ಹುಮಾಯುನ್‍ಶಹಾ ಮೂರನೇ ಅರಸ. ವೈರಿಗಳಿಗೆ ನೀಡುತ್ತಿದ್ದ ಶಿಕ್ಷೆಯಿಂದಾಗಿಯೇ ಕ್ರೂರಿ ಎಂದು ಹೆಸರಾಗಿದ್ದ. ಹಸಿದ ಹುಲಿಗಳ ಎದುರು ಎಸೆಯವುದು, ಕಣ್ಣು ಕೀಳಿಸುವುದು, ಕೈ ಕಾಲು ಕತ್ತರಿಸುವುದು ಸೇರಿದಂತೆ ಹಲವು ಬಗೆಯ ಶಿಕ್ಷೆ ನೀಡುತ್ತಿದ್ದ. ಕ್ಷಮೆ ಎನ್ನುವುದು ಆತನಲ್ಲಿ ಇರಲೇ ಇಲ್ಲ. ಬಹುತೇಕ ಇತಿಹಾಸಕರರು `ಜಾಲೀಂ’, `ಕ್ರೂರಿ’ ಎಂಬೆಲ್ಲ ಪದ ಬಳಸಿದ್ದಾರೆ.
ಅಲ್ಲಾವುದ್ದಿನ್ ಹುಮಾಯುನ್ ಶಹಾ ಆಳ್ವಿಕೆ ನಡೆಸಿದ್ದು ಮೂರೇ ವರ್ಷ (1458- 1461). ಅದು ಕೊನೆಯೇ ಇಲ್ಲದ ಒಳಸಂಚು, ಪಿತೂರಿ, ಅಂತ:ಕಲಹಗಳಿಂದ ತುಂಬಿದ ಸಮಯ. ಹುಮಾಯುನ್‍ಶಹಾನ ಆಡಳಿತದೊಂದಿಗೆ ಬಹಮನಿ ಸಾಮ್ರಾಜ್ಯದ ಅಂತ್ಯವೂ ಆರಂಭಗೊಂಡಿತು ಎಂದರೆ ಸರಿ ಎನ್ನಿಸಲಿಕ್ಕಿಲ್ಲ. ಯಾಕೆಂದರೆ, ಮತ್ತೊಂದು ಬಾರಿ ಬಹಮನಿ ಸಾಮ್ರಾಜ್ಯದ ಕೀರ್ತಿ ಸಮುದ್ರದಾಚೆ ಹರಡಿತ್ತು. ಹೀಗೆ ಬೀದರಿನ ಪ್ರಸಿದ್ಧಿ ಹೆಚ್ಚಿಸಿದಾತ ಬಹಮನಿ ಪ್ರಧಾನಿ ಮಹಮೂದ್ ಗವಾನ್. ಗವಾನ್‍ನನ್ನು ಪ್ರಧಾನಿಯಾಗಿ ನೇಮಕ ಮಾಡಿದಾತ ಜಾಲೀಂ ಎಂದೆಲ್ಲ ಇತಿಹಾಸಕಾರರಿಂದ ಟೀಕಿಸಲ್ಪಟ್ಟ ಹುಮಾಯುನ್‍ಶಹಾ. ಸಾಮ್ರಾಜ್ಯವೊಂದರ ಅಳಿವಿನ ಆರಂಭದಲ್ಲಿ ಅರಸನಾಗಿದ್ದ ಅಥವಾ ಆತನಿಂದಲೇ ಅಳಿವು ಆರಂಭವಾಯಿತು ಎನ್ನುವುದಕ್ಕಿಂತ ಸಾಮ್ರಾಜ್ಯವೊಂದು ಇನ್ನಷ್ಟು ಬಲಿಷ್ಠವಾಗಲು, ಇನ್ನಷ್ಟು ವರ್ಷ ಆಡಳಿತ ನಡೆಸಲು ಸಾಧ್ಯವಾಗುವಂತೆ ಯೋಗ್ಯ, ಸಮರ್ಥ ವ್ಯಕ್ತಿಯನ್ನು ಅಧಿಕಾರದಲ್ಲಿ ಕೂಡಿಸಿದಾತ ಹುಮಾಯುನ್‍ಶಹಾ ಎಂದರೆ, ಸರಿ ಎನ್ನಿಸಬಹುದು.
ಹುಮಾಯುನ್‍ಶಹಾ ಹೇಗಿದ್ದ, ಆತನ ವ್ಯಕ್ತಿತ್ವ ಹೇಗಿತ್ತು ಎನ್ನುವುದನ್ನು ತಿಳಿಯಲು, ಪಟ್ಟಕ್ಕೇರುವ ಸಂದರ್ಭದಲ್ಲಿ ಆತ ಮಾಡಿದ ಭಾಷಣ ನೆರವಾಗಬಲ್ಲದು. `ಬುರ್ಹಾನ್ ಎ ಮಾಸೀರ್’ ಕೃತಿಯಲ್ಲಿ ಅರಸನ ಭಾಷಣ ದಾಖಲಾಗಿದೆ.
`..ನಾವು ಈ ದೇಶದ ಇತಿಹಾಸದ ನೂತನ ಯುಗವೊಂದರ ಹೊಸ್ತಿಲಲ್ಲಿದ್ದೇವೆ. ಹೊರಗೆ ಸತ್ಯ ಮತ್ತು ವಿಶ್ವಾಸಾರ್ಹತೆಗಳಿಂದ ಅಲಂಕೃತನಾಗಿಯೂ, ಒಳಗೆ ದುರ್ಗಣ ಮತ್ತು ಗರ್ವಗಳಿಂದ ಮುಕ್ತನಾಗಿಯೂ ಇರುವವನೊಬ್ಬನ ಸಲಹೆಯಂತೆ ನಡೆಯುವುದಕ್ಕಿಂತ ಉತ್ತಮವಾದ ದಾರಿ ಈ ಸಂದರ್ಭದಲ್ಲಿ ನನಗೆ ಕಾಣಿಸುತ್ತಿಲ್ಲ. ಆದ್ದರಿಂದ ಖ್ವಾಜಾ ನಜಮುದ್ದಿನ್ ಮಹಮೂದ್ ಗವಾನ್‍ನನ್ನುನನ್ನ ಪ್ರಧಾನ ಮಂತ್ರಿಯನ್ನಾಗಿ ನೇಮಿಸಲು ತೀರ್ಮಾನಿಸಿದ್ದೇನೆ. ನ್ಯಾಯಪರತೆ ಮತ್ತು ಸಮಾನತೆಯ ಗುಣಗಳಿಂದಲೂ, ಆಳವಾದ ಚಿಂತನಶಕ್ತಿಯಿಂದಲೂ ಆತನು ರಾಜ್ಯದಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿಯಾಗಿದ್ದಾನೆ’. ಬುರ್ಹಾನ್ ಎ ಮಾಸೀರ್‍ನಲ್ಲಿರುವ ಈ ಸಾಲುಗಳ ಮಹಮೂದ್ ಗವಾನ್ ಜೊತೆಗೆ ಅರಸ ಹುಮಾಯುನ್‍ಶಹಾನ ವ್ಯಕ್ತಿತ್ವದ ಪರಿಚಯವನ್ನೂ ಮಾಡಿಕೊಡಬಲ್ಲವು.
ಅರಸರ ಕ್ರೂರ ಕೃತ್ಯಗಳ ವಿವರಣೆಯೂ ಇತಿಹಾಸದಲ್ಲಿದೆ.
ದಂಗೆ ಎದ್ದಿದ್ದ ಸಹೋದರ ಹಸನ್‍ಖಾನ್‍ನನ್ನು ಹಸಿದ ಹುಲಿಯ ಎದುರು ಎಸೆದಿದ್ದ. ರಾಜಕೀಯ ವಿರೋಧಿಗಳನ್ನು ಕುದಿಯುವ ಎಣ್ಣೆಯಲ್ಲಿ ಹಾಕಿಸಿದ್ದ. ಕೆಲವರನ್ನು ಆನೆಯಿಂದ ತುಳಿಸಿದ್ದ. ಇವು ನಿಜಕ್ಕೂ ನಡೆದಿರಬಹುದಾದ ಸಂಗತಿ ಆಗಿದ್ದಿರಬಹುದು. ಆದರೂ, ಹುಮಾಯುನ್‍ಶಹಾನನ್ನು ಕ್ರೂರಿ ಎನ್ನುವುದಕ್ಕಿಂತ `ಕಾಲದ ಫಲ’ ಎಂದರೆ ಹೆಚ್ಚುಸೂಕ್ತವಾಗಬಹುದು..
ಹುಮಾಯುನ್‍ಶಹಾನನ್ನು ಕುರಿತು ನಾನು ಹೇಳುತ್ತಲೇ ಇದ್ದೆ. ರೋಹಿತ್ ಕೇಳುತ್ತಿದ್ದ. ಆಗಾಗ ಅರ್ಧ ಕುಸಿದ ಗುಂಬಜ್‍ನತ್ತ, ಬಿಸಿಲು, ಮಳೆ, ಗಾಳಿಯ ಗುರಿ ಆಗಿದ್ದ ಸಮಾಧಿಯತ್ತ ನೋಡುತ್ತಿದ್ದ. ಏನೇನೋ ಆಲೋಚನೆ ಮಾಡುತ್ತಿದ್ದ.
ಎರಡನೇ ಬಾರಿ ದಂಗೆ ಎದ್ದ ಸಹೋದರನಿಗೆ ಶಿಕ್ಷೆ ನೀಡದಿದ್ದಲ್ಲಿ ಏನಾಗುತಿತ್ತು ಎಂದು ನಡುವೆ ಪ್ರಶ್ನಿಸಿದ. ಗವಾನ್‍ನನ್ನು ಪ್ರಧಾನಿಯಾಗಿ ಮಾಡದಿದ್ದಲ್ಲಿ ಬಹಮನಿ ಸಾಮ್ರಾಜ್ಯ ಮುಂದುವರೆಯುತಿತ್ತಾ ಎಂದೂ ಕೇಳಿದ.
ನಾನು ಮಾತನಾಡಲಿಲ್ಲ. ಸರಿ ತಪ್ಪುಗಳ ತೀರ್ಮಾನಕ್ಕೆ ಅವನೇ ಬರಲಿ ಎನ್ನುವುದು ನನ್ನ ನಿಲುವಾಗಿತ್ತು. ಒಂದೆರಡು ಕ್ಷಣಗಳ ನಂತರ ರೋಹಿತ್ ಗೆಲುವಾದ. ಹುಮಾಯುನ್‍ಶಹಾ ಕಾಲದ ಅಗತ್ಯಕ್ಕೆ ಅನುಗುಣವಾಗಿ ನಡೆದುಕೊಂಡಿರಬಹುದು ಎಂದು ಹೇಳಿದ.
ಸೂರ್ಯನ ಕಿರಣಗಳು ಗುಂಬಜ್ ಮೇಲ್ಭಾಗಕ್ಕೆ ಬಂದಿದ್ದವು. 16 ವರ್ಷಕ್ಕೇ ನನಗಿಂತ ಅರ್ಧ ಅಡಿ ಎತ್ತರ ಬೆಳೆದ ಮಗನಿಗೆ ಹಸಿವೂ ಆಗಿದ್ದಿರಬಹುದು ಅಂದುಕೊಂಡೆ. ಗುಂಬಜ್‍ಗಳ ಸಾಲು ದಾಟುತ್ತಿದ್ದಂತೆಯೇ ಹೋಟೆಲ್ ಕಣ್ಣಿಗೆ ಬಿತ್ತು. ಬಿಸಿಬಿಸಿ ಆಲೂಭಾತ್ ಮಿರ್ಚಿ ಸವಿಯುತ್ತಿದ್ದವರೂ ಕಂಡರು. ಮಗ ಇನ್ನಷ್ಟು ಉಲ್ಲಾಸಿತಗೊಂಡ. ಮಾತಿನ ಸದ್ದು ಜೋರಾಯಿತು.


